ಬಂಟ್ವಾಳ, ಕಲ್ಲಡ್ಕ: ಕಲ್ಲಡ್ಕ ಪೇಟೆಯಲ್ಲಿ ಆಟೋ ರಿಕ್ಷಾಗಳನ್ನು ನಿಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರಿಕ್ಷಾ ಚಾಲಕರು ಹಲವು ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತ ಪಾರ್ಕಿಂಗ್ ಸ್ಥಳದ ಕೊರತೆಯಿಂದ ಚಾಲಕರಿಗೆ ಸಮಸ್ಯೆಯಾಗುವುದರ ಜೊತೆಗೆ, ಪ್ರಯಾಣಿಕರಿಗೂ ಅಸೌಕರ್ಯ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಪೇಟೆಯಲ್ಲಿ ಸುಸಜ್ಜಿತ ಹಾಗೂ ವ್ಯವಸ್ಥಿತ ರಿಕ್ಷಾ ಪಾರ್ಕಿಂಗ್ ಸ್ಥಳ ನಿರ್ಮಿಸುವಂತೆ ಸಂಸದ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.
ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ರಿಕ್ಷಾ ಚಾಲಕರ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ, ಪೇಟೆಯಲ್ಲಿ ವಾಹನ ಸಂಚಾರವೂ ಮತ್ತಷ್ಟು ಸುಗಮವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಪ್ರಮುಖರು ಸೇರಿದಂತೆ ಕಲ್ಲಡ್ಕದ ರಿಕ್ಷಾ ಚಾಲಕರು ಉಪಸ್ಥಿತರಿದ್ದರು. ಬಹುಕಾಲದಿಂದ ಎದುರಿಸುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.





