ನವದೆಹಲಿ: ಬಿಜೆಪಿಯ ರಾಷ್ಟ್ರೀಯ ವಕ್ತಾರ ಸ್ಥಾನ ಸೇರಿದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಶೆಹಜಾದ್ ಪೂನಾವಾಲಾ, ತಮ್ಮ ನಿರ್ಧಾರದ ಹಿಂದೆ ವೈಯಕ್ತಿಕ ಹಾಗೂ ಆರ್ಥಿಕ ಕಾರಣಗಳಿವೆ ಎಂದು ಹೇಳಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೂನಾವಾಲಾ, ರಾಜಕೀಯ ಪಕ್ಷಗಳು ಕಾರ್ಯಕರ್ತರು ಅಥವಾ ವಕ್ತಾರರಿಗೆ ವೇತನ ನೀಡುವುದಿಲ್ಲ ಎಂದು ಹೇಳಿದ್ದಾರೆ.
“ನಾನು ಬಾಡಿಗೆ ಕಟ್ಟಬೇಕು. ನಾನು ಬಿಜೆಪಿಯಲ್ಲಿದ್ದೇನೆ ಎಂಬ ಕಾರಣಕ್ಕೆ ನನ್ನ ಮನೆ ಮಾಲೀಕರು ಉಚಿತವಾಗಿ ಬಾಡಿಗೆ ನೀಡುವುದಿಲ್ಲ. ಅವರು ಪ್ರತಿ ತಿಂಗಳ 1ರಂದು ಬಾಡಿಗೆ ಕೇಳುತ್ತಾರೆ. ರಾಜಕೀಯ ಪಕ್ಷಗಳು ಕಾರ್ಯಕರ್ತರಿಗೆ ವೇತನ ನೀಡುವುದಿಲ್ಲ,” ಎಂದು ಪೂನಾವಾಲಾ ಹೇಳಿದ್ದಾರೆ.
ಆದರೆ ಬಿಜೆಪಿ ತಮ್ಮನ್ನು ಆರ್ಥಿಕವಾಗಿ ಪೋಷಿಸಬೇಕು ಎಂಬ ನಿರೀಕ್ಷೆ ತನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ತಮ್ಮ ಪಾಲಿಗೆ ಉದ್ಯೋಗವಲ್ಲ, ಸೈದ್ಧಾಂತಿಕ ಬದ್ಧತೆಯ ವೇದಿಕೆ ಎಂದು ಹೇಳಿದ್ದಾರೆ.
ತಮ್ಮ ರಾಜೀನಾಮೆಗೆ ತುರ್ತು ವೈಯಕ್ತಿಕ ಮತ್ತು ಆರ್ಥಿಕ ಪರಿಸ್ಥಿತಿಗಳೇ ಪ್ರಮುಖ ಕಾರಣ ಎಂದು ತಿಳಿಸಿರುವ ಪೂನಾವಾಲಾ, ಮುಂದಿನ ದಿನಗಳಲ್ಲಿ ಖಾಸಗಿ ವಲಯಕ್ಕೆ ತೆರಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ವಿಚಾರಧಾರೆಗೆ ತಮ್ಮ ಬೆಂಬಲ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.





