20 September 2026 |

ಸಿಮ್ ಸ್ವಾಪ್ ವಂಚನೆ: ಮಂಗಳೂರಿನ 78 ವರ್ಷದ ನಿವೃತ್ತ ಉದ್ಯೋಗಿಗೆ ₹2.12 ಕೋಟಿ ನಷ್ಟ

  • 21 Aug 2026 10:23:31 AM

ಮಂಗಳೂರು: ಸಿಮ್‌ ಕಾರ್ಡ್‌ನ ನಿಯಂತ್ರಣವನ್ನು ಅಕ್ರಮವಾಗಿ ಪಡೆದು ನೆಟ್‌ ಬ್ಯಾಂಕಿಂಗ್‌ ಮೂಲಕ ಮಂಗಳೂರಿನ 78 ವರ್ಷದ ನಿವೃತ್ತ ಉದ್ಯೋಗಿಯೊಬ್ಬರ ವಿವಿಧ ಬ್ಯಾಂಕ್‌ ಖಾತೆಗಳಿಂದ ಸೈಬರ್‌ ವಂಚಕರು ₹2.12 ಕೋಟಿಗೂ ಅಧಿಕ ಹಣ ವರ್ಗಾಯಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

 

ಮುಂಬೈನಲ್ಲಿ ಸುಮಾರು 50 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಈ ಹಿರಿಯ ನಾಗರಿಕರು ಬಳಿಕ ಮಂಗಳೂರಿನಲ್ಲಿ ವಾಸವಾಗಿದ್ದರು. ಮುಂಬೈನ ಕರ್ಲಾದಲ್ಲಿ ತಮ್ಮ ಹೆಸರಿನಲ್ಲಿ ಪಡೆದಿದ್ದ ವೊಡಾಫೋನ್‌ ಮೊಬೈಲ್‌ ಸಂಖ್ಯೆಯನ್ನು ಸುಮಾರು 10 ವರ್ಷಗಳಿಂದ ಬಳಸುತ್ತಿದ್ದರು. ಇದೇ ಸಂಖ್ಯೆಯನ್ನು ಹಲವು ಬ್ಯಾಂಕ್‌ ಖಾತೆಗಳಿಗೂ ಸಂಪರ್ಕಿಸಿದ್ದರು.

 

ಕಳೆದ ಜುಲೈನಲ್ಲಿ ಏಕಾಏಕಿ ಮೊಬೈಲ್‌ ನೆಟ್‌ವರ್ಕ್‌ ಸ್ಥಗಿತಗೊಂಡಿತ್ತು. ಈ ಬಗ್ಗೆ ಮಂಗಳೂರಿನ ವೊಡಾಫೋನ್‌ ಕಚೇರಿಯಲ್ಲಿ ವಿಚಾರಿಸಿದಾಗ, ಅವರ ಮೊಬೈಲ್‌ ಸಂಖ್ಯೆಯನ್ನು ಏರ್‌ಟೆಲ್‌ ನೆಟ್‌ವರ್ಕ್‌ಗೆ ಪೋರ್ಟ್‌ ಮಾಡಿ ಮತ್ತೊಬ್ಬರಿಗೆ ನೀಡಿರುವುದು ತಿಳಿದುಬಂದಿದೆ. ನಂತರ ಅವರು ಏರ್‌ಟೆಲ್‌ ಕಚೇರಿಗೆ ತೆರಳಿ ಸಂಖ್ಯೆಯನ್ನು ತಕ್ಷಣವೇ ಬ್ಲಾಕ್‌ ಮಾಡುವಂತೆ ಮನವಿ ಮಾಡಿದ್ದರು.

 

ಆದರೆ ಆಗಸ್ಟ್‌ 17ರಂದು ಐಡಿಎಫ್‌ಸಿ ಬ್ಯಾಂಕ್‌ಗೆ ಭೇಟಿ ನೀಡಿದಾಗ ಖಾತೆಯಲ್ಲಿ ಅನುಮಾನಾಸ್ಪದ ಆನ್‌ಲೈನ್‌ ವಹಿವಾಟುಗಳು ನಡೆದಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಖಾತೆಯನ್ನು ಸ್ಥಗಿತಗೊಳಿಸಿ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಪರಿಶೀಲಿಸಿದಾಗ, ನೆಟ್‌ ಬ್ಯಾಂಕಿಂಗ್‌ ಮೂಲಕ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ.

 

ಇದರಿಂದ ಅನುಮಾನಗೊಂಡ ಅವರು ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ, ಬ್ಯಾಂಕ್‌ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿದ್ದ ತಮ್ಮ ಖಾತೆಗಳನ್ನೂ ಪರಿಶೀಲಿಸಿದ್ದಾರೆ. ಈ ಖಾತೆಗಳಲ್ಲಿಯೂ ಭಾರೀ ಪ್ರಮಾಣದ ಹಣ ವಂಚಕರ ಪಾಲಾಗಿರುವುದು ಗೊತ್ತಾಗಿದೆ.

 

ಜುಲೈ 16ರಿಂದ ಆಗಸ್ಟ್‌ 18ರ ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹2,12,95,500 ಹಣವನ್ನು ಸೈಬರ್‌ ವಂಚಕರು ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ವರ್ಗಾವಣೆಯಾದ ಸಂದರ್ಭಗಳಲ್ಲಿ ಬ್ಯಾಂಕ್‌ಗಳಿಂದ ಯಾವುದೇ ಎಸ್‌ಎಂಎಸ್‌ ಅಥವಾ ಕರೆಗಳ ಮೂಲಕ ಎಚ್ಚರಿಕೆ ಬಂದಿರಲಿಲ್ಲ ಎನ್ನಲಾಗಿದೆ.

 

ಈ ನಡುವೆ ‘ಹೇಮಂತ್‌’ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯೊಬ್ಬರು ಸಂತ್ರಸ್ತರಿಗೆ ಪದೇಪದೇ ಕರೆ ಮಾಡುತ್ತಿದ್ದರು. ಬ್ಯಾಂಕ್‌ ವಹಿವಾಟುಗಳ ವಿವರ ಪರಿಶೀಲಿಸಿದಾಗ, ಇದೇ ಹೆಸರಿನ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ.

 

ಸಿಮ್‌ ನಿಯಂತ್ರಣವನ್ನು ಪಡೆದು ನೆಟ್‌ ಬ್ಯಾಂಕಿಂಗ್‌ ಪ್ರವೇಶದ ಮೂಲಕ ವಂಚನೆ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಮಂಗಳೂರಿನ ಸೈಬರ್‌ ಕ್ರೈಂ (CEN) ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚನೆಯ ವಿಧಾನ, ಹಣ ವರ್ಗಾವಣೆಯಾದ ಖಾತೆಗಳು ಹಾಗೂ ಆರೋಪಿಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.