20 September 2026 |

ಉಚಿತ ವಿದ್ಯುತ್‌ಗಿಂತ ಶಾಶ್ವತ ಪರಿಹಾರಕ್ಕೆ ಮೋದಿ ಒತ್ತು: 50 ಲಕ್ಷ ಮನೆಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್

  • 22 Aug 2026 10:05:59 AM

ನವದೆಹಲಿ: ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡುವುದಕ್ಕಿಂತ, ಮನೆಗಳೇ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ ರೂಪಿಸುವುದು ಶಾಶ್ವತ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 

ಕೇಂದ್ರ ಸರ್ಕಾರದ ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ ಅಡಿಯಲ್ಲಿ ದೇಶಾದ್ಯಂತ 50.06 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ರೂಫ್‌ಟಾಪ್ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದೆ. ಈ ಯೋಜನೆಯಡಿ ಸುಮಾರು 19 ಲಕ್ಷ ಮನೆಗಳು ಈಗ ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

 

ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಕುಟುಂಬಗಳು ತಮ್ಮದೇ ವಿದ್ಯುತ್ ಉತ್ಪಾದಿಸಬಹುದು. ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆಯಾದರೆ ಅದನ್ನು ಗ್ರಿಡ್‌ಗೆ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಅವಕಾಶವೂ ಇದೆ.

 

ಯೋಜನೆಯಡಿ ಒಂದು ಕೋಟಿ ಮನೆಗಳಿಗೆ ರೂಫ್‌ಟಾಪ್ ಸೌರ ವ್ಯವಸ್ಥೆ ಅಳವಡಿಸಿ, ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 

 

ಇದರ ಮೂಲಕ ವಿದ್ಯುತ್ ಬಿಲ್ ಕಡಿತದ ಜೊತೆಗೆ ದೇಶದಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವುದು ಹಾಗೂ ಸ್ವಚ್ಛ ಇಂಧನದತ್ತ ಸಾಗುವುದು ಸರ್ಕಾರದ ಉದ್ದೇಶವಾಗಿದೆ.