ಮಂಗಳೂರು: ಕರಾವಳಿ ಭಾಗದ ರೈಲು ಪ್ರಯಾಣಿಕರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದೆ. ಮಂಗಳೂರು ರೈಲ್ವೇ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಹಿಂಪಡೆದು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ.
ರೈಲ್ವೇ ಮಂಡಳಿಯ ಈ ನಿರ್ಧಾರದ ಕುರಿತು ನೈರುತ್ಯ ರೈಲ್ವೇ, ದಕ್ಷಿಣ ರೈಲ್ವೇ ಹಾಗೂ ಕೊಂಕಣ ರೈಲ್ವೇಯ ಉನ್ನತ ಅಧಿಕಾರಿಗಳಿಗೆ ಶುಕ್ರವಾರ ಅಧಿಕೃತ ಸುತ್ತೋಲೆ ಕಳುಹಿಸಲಾಗಿದೆ. ಹೊಸ ವ್ಯವಸ್ಥೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಆದೇಶದಂತೆ ಉಳ್ಳಾಲ ಸೇರಿದಂತೆ ಮಂಗಳೂರು ರೈಲ್ವೇ ವ್ಯಾಪ್ತಿಯು ಇನ್ನು ಮುಂದೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಅಧೀನಕ್ಕೆ ಬರಲಿದೆ. ಇದರಿಂದ ದಕ್ಷಿಣ ರೈಲ್ವೇ ಮತ್ತು ನೈರುತ್ಯ ರೈಲ್ವೇ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಪಡೀಲ್‌ನಿಂದ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.
ಇದೇ ವೇಳೆ ತೋಕೂರು ರೈಲ್ವೇ ನಿಲ್ದಾಣವು ಹಿಂದಿನಂತೆಯೇ ಕೊಂಕಣ ರೈಲ್ವೇ ವ್ಯಾಪ್ತಿಯಲ್ಲೇ ಮುಂದುವರಿಯಲಿದೆ. ಕೊಂಕಣ ರೈಲ್ವೇ ಮತ್ತು ನೈರುತ್ಯ ರೈಲ್ವೇ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ತೋಕೂರು ಕಾರ್ಯನಿರ್ವಹಿಸಲಿದೆ.
ವ್ಯಾಪ್ತಿ ಬದಲಾವಣೆಯ ಹಿನ್ನೆಲೆಯಲ್ಲಿ ಗಜೆಟೆಡ್ ಅಧಿಕಾರಿಗಳ ವಲಯ ಬದಲಾವಣೆ ಹಾಗೂ ವರ್ಗಾವಣೆ ಸಂಬಂಧ ಮುಂದಿನ ಹಂತದಲ್ಲಿ ಆದೇಶ ಹೊರಡಿಸಲಾಗುವುದು. ಗ್ರೂಪ್ ಅಧಿಕಾರಿಗಳ ವಿಚಾರದಲ್ಲಿ ಚಾಲ್ತಿಯಲ್ಲಿರುವ ನಿಯಮಗಳಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಮಂಗಳೂರು ರೈಲ್ವೇ ವ್ಯಾಪ್ತಿಯನ್ನು ನೈರುತ್ಯ ರೈಲ್ವೆಗೆ ಮರುಸೇರ್ಪಡೆಗೊಳಿಸುವ ಮೂಲಕ ಕರಾವಳಿ ಭಾಗದ ಜನರ ಹಲವು ವರ್ಷಗಳ ಬೇಡಿಕೆಗೆ ಪರಿಹಾರ ದೊರೆತಂತಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಚಿವರಾದ ಎರಡನೇ ವರ್ಷದಲ್ಲೇ ಮಂಗಳೂರು ರೈಲ್ವೇ ವ್ಯಾಪ್ತಿಯನ್ನು ಮರುಸೇರ್ಪಡೆಗೊಳಿಸುವ ಪ್ರಯತ್ನ ಆರಂಭಿಸಿದ್ದಾಗಿ ತಿಳಿಸಿದ್ದಾರೆ. ಇದೀಗ ಆ ಪ್ರಯತ್ನ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.





