20 September 2026 |

ಮಂಗಳೂರು: ಬೃಹತ್ ಅಲೆಗಳ ಹೊಡೆತಕ್ಕೆ ಟ್ರಾಲರ್ ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ

  • 24 Aug 2026 09:30:00 AM

ಮಂಗಳೂರು: ಹಳೆ ಬಂದರಿನ ಅಳಿವೆಬಾಗಿಲು ಸಮೀಪ ತೀವ್ರ ಗಾಳಿ ಹಾಗೂ ಬೃಹತ್ ಅಲೆಗಳ ರಭಸಕ್ಕೆ ಸಿಲುಕಿದ ‘ಅಯಾನ್’ ಹೆಸರಿನ ಟ್ರಾಲರ್ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

 

ಬಂಟ್ವಾಳ ತಾಲೂಕಿನ ನಿವಾಸಿ ಇಬ್ರಾಹಿಂ ಖಲೀಲ್ ಮೂಸಾ ಅವರಿಗೆ ಸೇರಿದ ‘ಅಯಾನ್’ ಬೋಟ್ ಶನಿವಾರ ಸಂಜೆ ಮಂಗಳೂರು ಧಕ್ಕೆಯಿಂದ ‘ಕರೆ ಫಿಶಿಂಗ್‌’ಗೆ ತೆರಳಿತ್ತು. ಅಳಿವೆಬಾಗಿಲು ದಾಟಿದ ಕೆಲವೇ ಸಮಯದಲ್ಲಿ ತೀವ್ರ ಗಾಳಿ ಮತ್ತು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಬೋಟ್ ನಿಯಂತ್ರಣ ಕಳೆದುಕೊಂಡು ಮುಳುಗಲು ಆರಂಭಿಸಿತು. ಬೋಟ್‌ನ ಮುಂಭಾಗ ನೀರಿನ ಮೇಲೆ ಕಾಣಿಸಿಕೊಂಡು ಮುಳುಗುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

ಬೋಟ್ ಅಪಾಯಕ್ಕೆ ಸಿಲುಕಿರುವುದನ್ನು ಗಮನಿಸಿದ ಸಮೀಪದ ಮೀನುಗಾರರು ತಕ್ಷಣ ಕಾರ್ಯಾಚರಣೆಗೆ ಮುಂದಾದರು. ಹಗ್ಗ ಹಾಗೂ ಇತರ ರಕ್ಷಣಾ ಸಾಧನಗಳ ನೆರವಿನಿಂದ ಬೋಟ್‌ನಲ್ಲಿದ್ದ ಆರು ಮಂದಿಯನ್ನು ತಮ್ಮ ಬೋಟ್‌ಗೆ ಸ್ಥಳಾಂತರಿಸಿ ಪ್ರಾಣಾಪಾಯದಿಂದ ಪಾರು ಮಾಡಿದರು.

 

ಈ ಕುರಿತು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ. ಮಾಹಿತಿ ನೀಡಿದ್ದು, ಸ್ಥಳೀಯ ಮೀನುಗಾರರ ತ್ವರಿತ ಕಾರ್ಯಾಚರಣೆಯಿಂದಾಗಿ ಬೋಟ್‌ನಲ್ಲಿದ್ದ ಎಲ್ಲ ಆರು ಮಂದಿ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.