20 September 2026 |

ಪಾಕಿಸ್ತಾನದ ‘ಡ್ರೈವರ್‌ಲೆಸ್’ ಕಾರಿನ ಟೆಸ್ಟ್ ಡ್ರೈವ್… ‘ಪ್ರತಿಭೆಗೆ ಕೊರತೆಯಿಲ್ಲ’ ಎಂದ ಬೆನ್ನಲ್ಲೇ ಪೊಲೀಸ್ ವಾಹನಕ್ಕೆ ಡಿಕ್ಕಿ!

  • 02 Sep 2026 11:03:50 AM

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತಂತ್ರಜ್ಞಾನ ಪ್ರದರ್ಶನವೊಂದು ನಿರೀಕ್ಷೆಗೂ ಮೀರಿದ ರೀತಿಯಲ್ಲಿ ವೈರಲ್ ಆಗಿದೆ. ‘ಡ್ರೈವರ್‌ಲೆಸ್’ ಕಾರಿನ ಪ್ರದರ್ಶನದ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

 

ಇಸ್ಲಾಮಾಬಾದ್‌ನ ಡಿ-ಚೌಕ್‌ನಲ್ಲಿ ಪತ್ರಕರ್ತ ಮುಹಮ್ಮದ್ ಅಲೀಜಾ ಅವರು ಪ್ರಾಯೋಗಿಕ ಕಾರಿನ ಪ್ರದರ್ಶನವನ್ನು ಚಿತ್ರೀಕರಿಸುತ್ತಿದ್ದರು. ಕಾರಿನಲ್ಲಿ ಚಾಲಕನಿರಲಿಲ್ಲ. ಈ ವೇಳೆ ಪಾಕಿಸ್ತಾನದಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬರ್ಥದಲ್ಲಿ ಅವರು ಮಾತನಾಡುತ್ತಿದ್ದಂತೆಯೇ, ಕಾರು ಏಕಾಏಕಿ ದಿಕ್ಕು ಬದಲಿಸಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪೊಲೀಸ್ ವಾಹನದತ್ತ ಚಲಿಸಿದೆ. ಕಾರನ್ನು ನಿಲ್ಲಿಸಲು ಪ್ರಯತ್ನಿಸಿದರೂ ಅದು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 

 

ಆದರೆ ಇದು ಸಂಪೂರ್ಣ ಸ್ವಯಂಚಾಲಿತ ಕಾರು ಆಗಿರಲಿಲ್ಲ. ವರದಿಗಳ ಪ್ರಕಾರ, ಅಬೋಟಾಬಾದ್ ಮೂಲದ ತಂತ್ರಜ್ಞಾನ ವಿದ್ಯಾರ್ಥಿ ಎಹ್ಸಾನ್ ಜಫರ್ ಅಬ್ಬಾಸಿ ಅಭಿವೃದ್ಧಿಪಡಿಸಿದ್ದ ಈ ವಾಹನವನ್ನು ಇಂಟರ್ನೆಟ್ ಮೂಲಕ ರಿಮೋಟ್ ಕಂಟ್ರೋಲ್‌ನಲ್ಲಿ ನಿರ್ವಹಿಸಲಾಗುತ್ತಿತ್ತು. ಆರಂಭಿಕ ವರದಿಗಳಲ್ಲಿ ಇಂಟರ್ನೆಟ್ ಸಂಪರ್ಕದ ತಾಂತ್ರಿಕ ಸಮಸ್ಯೆಯಿಂದ ವಾಹನ ನಿಯಂತ್ರಣ ತಪ್ಪಿದೆ ಎಂದು ತಿಳಿಸಲಾಗಿತ್ತು. 

 

ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹಾಗೂ ಹಾಸ್ಯಮಯ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ‘ಪ್ರತಿಭೆಗೆ ಕೊರತೆಯಿಲ್ಲ’ ಎಂಬ ಹೇಳಿಕೆಯ ಬೆನ್ನಲ್ಲೇ ನಡೆದ ಈ ಡಿಕ್ಕಿ ಘಟನೆಯ ಸಮಯವೇ ನೆಟ್ಟಿಗರಿಗೆ ಹೆಚ್ಚು ಕುತೂಹಲ ಮೂಡಿಸಿದೆ. 

 

ಈ ನಡುವೆ, ಇಸ್ಲಾಮಾಬಾದ್ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿ ಯಾವುದೇ ಅಪರಾಧ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರದರ್ಶನದ ವೇಳೆ ನಡೆದ ತಪ್ಪನ್ನು ಪೊಲೀಸರು ‘ನಿಜವಾದ ತಪ್ಪು’ ಎಂದು ಪರಿಗಣಿಸಿದ್ದು, ಯುವ ತಂತ್ರಜ್ಞಾನ ವಿದ್ಯಾರ್ಥಿಗೆ ಪ್ರೋತ್ಸಾಹ ನೀಡಿದ್ದಾರೆ.