ನೇಪಾಳದ ಪ್ರವಾಹ ಪೀಡಿತ ಹಿಮಾಲಯ ಪ್ರದೇಶದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್ ಕ್ಯಾಪ್ಟನ್ ಪ್ರಿಯಾ ಅಧಿಕಾರಿ ಗಮನ ಸೆಳೆದಿದ್ದಾರೆ. ಕಳೆದ ಆರು ದಿನಗಳಲ್ಲಿ ಅವರು ಸುಮಾರು 100 ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.
ಪ್ರವಾಹದಿಂದಾಗಿ ಹಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡಿದ್ದು, ಅಪಾಯದಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ಪ್ರಿಯಾ ಅಧಿಕಾರಿ ನಿರಂತರವಾಗಿ ಹಾರಾಟ ನಡೆಸಿದ್ದಾರೆ.
ಈ ಕಾರ್ಯಾಚರಣೆ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನದ್ದಾಗಿದೆ ಎಂದು ಅವರು ಹೇಳಿದ್ದಾರೆ. 2015ರ ನೇಪಾಳ ಭೂಕಂಪದ ಸಂದರ್ಭಕ್ಕಿಂತಲೂ ಈ ಬಾರಿ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು. ಭೂಕುಸಿತ ಮತ್ತು ಪ್ರವಾಹದಿಂದ ಉಂಟಾದ ಹೆಚ್ಚಿನ ಪ್ರಮಾಣದ ಹಾನಿ ಕಿರಿದಾದ ಕಣಿವೆಯೊಂದರಲ್ಲಿ ಕೇಂದ್ರೀಕೃತವಾಗಿರುವುದು ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣಗೊಳಿಸಿತ್ತು ಎಂದು ಅವರು ತಿಳಿಸಿದ್ದಾರೆ.
ನಿರಂತರ ಹಾರಾಟದಿಂದ ತೀವ್ರ ಆಯಾಸವಾಗಿದ್ದರೂ, ತರಬೇತಿ ಮತ್ತು ಅನುಭವದ ಮೇಲೆ ವಿಶ್ವಾಸವಿಟ್ಟು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಪ್ರಿಯಾ ಅಧಿಕಾರಿ ಹೇಳಿದ್ದಾರೆ.
ಅಪಾಯದ ನಡುವೆಯೂ ಮಾನವೀಯ ಸೇವೆಗಾಗಿ ನಿರಂತರವಾಗಿ ಹಾರಾಟ ನಡೆಸುತ್ತಿರುವ ಪ್ರಿಯಾ ಅಧಿಕಾರಿ ಅವರ ಧೈರ್ಯ ಮತ್ತು ಸಮರ್ಪಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.





