20 September 2026 |

ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿಗೆ ಉಡುಪಿ ಸಜ್ಜು; ಹುಲಿವೇಷ, ಮಲ್ಲಯುದ್ಧವೇ ಪ್ರಮುಖ ಆಕರ್ಷಣೆ!

  • 03 Sep 2026 03:16:05 PM

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಸಂಭ್ರಮಕ್ಕೆ ಕೃಷ್ಣನ ನಾಡು ಉಡುಪಿ ಸಜ್ಜಾಗುತ್ತಿದೆ. ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಅಲಂಕಾರ ಹಾಗೂ ವಿವಿಧ ಸಿದ್ಧತಾ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

 

ಶೀರೂರು ಮಠದ ಪರ್ಯಾಯದಲ್ಲಿ ನಡೆಯಲಿರುವ ಈ ಬಾರಿಯ ಕೃಷ್ಣೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲೂ ಹುಲಿವೇಷ ಸ್ಪರ್ಧೆ ಹಾಗೂ ಮಲ್ಲಯುದ್ಧ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ.

 

ಸೆಪ್ಟೆಂಬರ್ 4ರಂದು ರಾಜಾಂಗಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಹುಲಿವೇಷ ಸ್ಪರ್ಧೆ ನಡೆಯಲಿದೆ. ಸೆಪ್ಟೆಂಬರ್ 5ರಂದು ರಥಬೀದಿಯಲ್ಲಿ ವಿಟ್ಲಪಿಂಡಿ ವೈಭವ ನಡೆಯಲಿದ್ದು, ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.

 

ಇದೇ ವೇಳೆ ಮೈಸೂರು ಹಾಗೂ ಮಂಡ್ಯ ಭಾಗದ ಪ್ರಸಿದ್ಧ ಜಟ್ಟಿಗಳಿಂದ ವಿಶೇಷ ಮಲ್ಲಯುದ್ಧ ಪ್ರದರ್ಶನ ಕೂಡ ನಡೆಯಲಿದೆ. ಕೃಷ್ಣಾಷ್ಟಮಿ ಸಂಭ್ರಮದಲ್ಲಿ ಈ ಬಾರಿ ಹುಲಿವೇಷ ಹಾಗೂ ಮಲ್ಲಯುದ್ಧ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆಯಲಿವೆ.