20 September 2026 |

ಪಣಂಬೂರು ಬಳಿ ನಿಯಂತ್ರಣ ತಪ್ಪಿ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಪಲ್ಟಿ

  • 04 Sep 2026 12:59:02 PM

ಸುರತ್ಕಲ್: ಕಾರ್ಕಳದಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಪಣಂಬೂರಿನ ಎಂಸಿಎಫ್‌ ಸಂಸ್ಥೆಯ ಸಮೀಪ ಶುಕ್ರವಾರ ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ.

 

ಎಂಸಿಎಫ್‌ ಬಳಿಗೆ ಬರುತ್ತಿದ್ದ ವೇಳೆ ಬಸ್‌ನ ಒಂದು ಚಕ್ರ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಸರ್ವಿಸ್‌ ರಸ್ತೆಯ ಭಾಗಕ್ಕೆ ಮಗುಚಿ ಬಿದ್ದಿದೆ.

 

ಘಟನೆಯಲ್ಲಿ ಒಬ್ಬ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.

 

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಮಾಹಿತಿ ಪಡೆದ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.