20 September 2026 |

ಕಂಬಳಕ್ಕೆ ₹5 ಕೋಟಿ ವಿಶೇಷ ಅನುದಾನ; ಡಿ.ಕೆ.ಶಿವಕುಮಾರ್ ಭರವಸೆ

  • 05 Sep 2026 01:09:05 PM

ಮಂಗಳೂರು: ರಾಜ್ಯ ಮಾನ್ಯತೆ ಪಡೆದಿರುವ ಇತಿಹಾಸ ಪ್ರಸಿದ್ಧ ಕಂಬಳ ಕ್ರೀಡೆಯ ಅಭಿವೃದ್ಧಿ ಹಾಗೂ ಪ್ರೋತ್ಸಾಹಕ್ಕಾಗಿ ಮುಂದಿನ ಬಜೆಟ್‌ನಲ್ಲಿ ₹5 ಕೋಟಿ ವಿಶೇಷ ಅನುದಾನ ನೀಡಲು ಸರ್ಕಾರ ಮುಂದಾಗಿದೆ.

 

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸೇರಿದಂತೆ ನಿಯೋಗ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತು.

 

ರಾಜ್ಯದಲ್ಲಿ ನಡೆಯಲಿರುವ 27 ಕಂಬಳಗಳ ಆಯೋಜನೆಗೆ ₹5 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಹಾಗೂ ಈ ಕುರಿತು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ನಿಯೋಗ ಮನವಿ ಮಾಡಿತು.

 

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳಕ್ಕೆ ₹5 ಕೋಟಿ ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ನಿಯೋಗ ತಿಳಿಸಿದೆ.