08 September 2026 |

ಗ್ಯಾಸ್‌ ಸಿಲಿಂಡರ್‌ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ: 25 ದಿನಕ್ಕೊಮ್ಮೆ ಅವಕಾಶ

  • 07 Sep 2026 06:48:46 PM

ನವದೆಹಲಿ: ಎಲ್‌ಪಿಜಿ ಗೃಹಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಯನ್ನು ಪ್ರಕಟಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ರಿಫಿಲ್ ಬುಕ್ ಮಾಡಲು ಇನ್ನು ಮುಂದೆ ಒಂದೇ ರೀತಿಯ ಅವಧಿ ಅನ್ವಯವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸೋಮವಾರ ತಿಳಿಸಿದ್ದಾರೆ.

 

ಈ ಹಿಂದೆ ಗ್ರಾಮೀಣ ಪ್ರದೇಶದ ಗ್ರಾಹಕರು ಹೊಸ ಸಿಲಿಂಡರ್‌ಗಾಗಿ 45 ದಿನಗಳವರೆಗೆ ಕಾಯಬೇಕಾಗಿತ್ತು. ಇದೀಗ ಈ ಅವಧಿಯನ್ನು ಕಡಿತಗೊಳಿಸಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಗೃಹಬಳಕೆದಾರರು 25 ದಿನಗಳಿಗೊಮ್ಮೆ ರಿಫಿಲ್ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ.

 

ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ಪರಿಣಾಮ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಗೆ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಿಗೆ 45 ದಿನಗಳ ಬುಕಿಂಗ್ ಅಂತರವನ್ನು ನಿಗದಿಪಡಿಸಲಾಗಿತ್ತು ಎಂದು ಸುರೇಶ್ ಗೋಪಿ ತಿಳಿಸಿದ್ದಾರೆ.

 

ಸದ್ಯ ದೇಶದಲ್ಲಿ ಎಲ್‌ಪಿಜಿ ಪೂರೈಕೆ ವ್ಯವಸ್ಥೆ ಸಾಕಷ್ಟು ಸುಧಾರಿಸಿದ್ದು, ಸಿಲಿಂಡರ್‌ಗಳ ಬಾಕಿ ಬೇಡಿಕೆಯೂ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬುಕಿಂಗ್ ನಿಯಮವನ್ನು ಸಡಿಲಿಸಿದೆ.

 

ಹೊಸ ನಿಯಮದಂತೆ, ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ ಗೃಹಬಳಕೆದಾರರು ಪ್ರತಿ 25 ದಿನಗಳಿಗೊಮ್ಮೆ ಎಲ್‌ಪಿಜಿ ರಿಫಿಲ್ ಬುಕ್ಕಿಂಗ್ ಮಾಡಬಹುದು. ಈ ಬದಲಾವಣೆಯನ್ನು ಕೂಡಲೇ ಜಾರಿಗೆ ತರುವಂತೆ ಪೆಟ್ರೋಲಿಯಂ ಸಚಿವಾಲಯವು ಸಂಬಂಧಿತ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ.