08 September 2026 |

ವಿಟ್ಲದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮೂವರು ಬಂಧನ

  • 08 Sep 2026 11:33:24 AM

ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ, 2026ರ ಫೆಬ್ರವರಿಯಿಂದ ಆಗಸ್ಟ್‌ವರೆಗೆ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಜವಾದ್, ಶಹೀದ್ ಹಾಗೂ ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಬಾಲಕ ಸೆಪ್ಟೆಂಬರ್ 4ರಂದು ನೀಡಿದ ದೂರಿನ ಮೇರೆಗೆ ವಿಟ್ಲ ಠಾಣೆಯಲ್ಲಿ ಅ.ಕ್ರ. 185/2026ರಿಂದ 190/2026ರವರೆಗೆ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೋಕ್ಸೋ ಕಾಯ್ದೆ-2012ರ ಕಲಂ 4(2), 5(m), 6 ಹಾಗೂ 8ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ತನಿಖೆಯ ವೇಳೆ ಜವಾದ್, ಶಹೀದ್ ಮತ್ತು ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಉಳಿದ ಆರೋಪಿಗಳ ಪತ್ತೆ ಹಾಗೂ ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.