11 September 2026 |

ಹಬ್ಬದ ಸೀಸನ್‌ನಲ್ಲಿ ತರಕಾರಿ ದರ ಏರಿಕೆ: ಈರುಳ್ಳಿ ಬೆಲೆ ಒಂದೇ ತಿಂಗಳಲ್ಲಿ ದುಪ್ಪಟ್ಟು

  • 11 Sep 2026 10:46:35 AM

ಹಬ್ಬಗಳ ಸಂಭ್ರಮ ಹೆಚ್ಚಾಗುತ್ತಿದ್ದಂತೆ ತರಕಾರಿ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟುತ್ತಿದೆ. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ ಹಲವು ತರಕಾರಿಗಳ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಕೆಲವು ತರಕಾರಿಗಳ ಬೆಲೆ ಶೇ.30ಕ್ಕಿಂತಲೂ ಹೆಚ್ಚು ಹೆಚ್ಚಾಗಿದೆ. ಹಬ್ಬದ ಸಂದರ್ಭಗಳಲ್ಲಿ ತರಕಾರಿಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ದರ ಏರಿಕೆ ಮುಂದುವರಿಯುವ ಆತಂಕವೂ ಇದೆ.

 

ಗ್ರಾಮೀಣ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ

ಇದುವರೆಗೆ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಕೆಲವು ತರಕಾರಿಗಳು ಕಡಿಮೆ ದರದಲ್ಲಿ ಸಿಗುತ್ತಿದ್ದವು. ಆದರೆ ಇತ್ತೀಚೆಗೆ ಗ್ರಾಮೀಣ ಮಾರುಕಟ್ಟೆಗಳಲ್ಲೂ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಬ್ಬದ ಅಡುಗೆಗೆ ಬೇಕಾಗುವ ತರಕಾರಿಗಳನ್ನು ಖರೀದಿಸಲು ಕುಟುಂಬಗಳು ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 

ಜಿಲ್ಲೆಯ ಮಾರುಕಟ್ಟೆಗಳಿಗೆ ಅಗತ್ಯವಿರುವ ತರಕಾರಿಗಳ ಬಹುಪಾಲು ಘಟ್ಟ ಪ್ರದೇಶಗಳು ಹಾಗೂ ವಿವಿಧ ಹೊರ ಜಿಲ್ಲೆಗಳಿಂದ ಬರುತ್ತವೆ. ಇತ್ತೀಚಿನ ಕಡಿಮೆ ಮಳೆ, ಹವಾಮಾನದಲ್ಲಿನ ಬದಲಾವಣೆ ಹಾಗೂ ಬೆಳೆಗಳಿಗೆ ತಗುಲಿರುವ ವಿವಿಧ ರೋಗಗಳು ಉತ್ಪಾದನೆಯ ಮೇಲೆ ಪರಿಣಾಮ ಬೀರಿವೆ. ಇದರಿಂದ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆಯಾಗಿದ್ದು, ಸಹಜವಾಗಿಯೇ ಬೆಲೆ ಏರಿಕೆಯಾಗಿದೆ.

 

ಈರುಳ್ಳಿ ಬೆಲೆ 30ರಿಂದ 60 ರೂ.ಗೆ

ತರಕಾರಿ ದರ ಏರಿಕೆಯಲ್ಲಿ ಈರುಳ್ಳಿ ಪ್ರಮುಖವಾಗಿ ಗಮನ ಸೆಳೆಯುತ್ತಿದೆ. ಕಳೆದ ತಿಂಗಳು ಕೆಜಿಗೆ ಸುಮಾರು ₹30ರಷ್ಟಿದ್ದ ಈರುಳ್ಳಿ ಇದೀಗ ₹60ಕ್ಕೆ ತಲುಪಿದೆ. ಅಂದರೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ.

 

ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬಾರದಿರುವುದು ಹಾಗೂ ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಪೂರೈಕೆ ಕಡಿಮೆಯಾಗಿರುವ ಪರಿಣಾಮ ಸಗಟು ಮಾರುಕಟ್ಟೆಯಿಂದ ಹಿಡಿದು ಚಿಲ್ಲರೆ ಅಂಗಡಿಗಳವರೆಗೂ ಈರುಳ್ಳಿ ಬೆಲೆ ಏರಿಕೆಯಾಗಿದೆ.

 

ಈರುಳ್ಳಿ ದರ ಹೆಚ್ಚಳದ ಪರಿಣಾಮ ಮನೆಗಳ ಅಡುಗೆ ಖರ್ಚಿನ ಜೊತೆಗೆ ಹೋಟೆಲ್‌ಗಳು, ಸಣ್ಣ ಉಪಾಹಾರ ಗೃಹಗಳು ಹಾಗೂ ದಿನನಿತ್ಯದ ಆಹಾರ ಪದಾರ್ಥಗಳನ್ನು ತಯಾರಿಸುವವರ ಮೇಲೂ ಹೆಚ್ಚುವರಿ ಹೊರೆ ಬಿದ್ದಿದೆ.

 

ಗ್ರಾಮೀಣ ಭಾಗದಲ್ಲಿ ತರಕಾರಿಗಳ ದರ

ತರಕಾರಿ| ಕಳೆದ ತಿಂಗಳು| ಈ ತಿಂಗಳು

ಅಲಸಂಡೆ| ₹50| ₹70

ಬೀನ್ಸ್| ₹60| ₹70

ಬಟಾಟೆ| ₹20| ₹30

ಟೊಮೆಟೋ| ₹20| ₹30

ಸೌತೆ| ₹15| ₹25

ಹೀರೆಕಾಯಿ| ₹40| ₹60

ಕೋಸು| ₹25| ₹40

ಚೀನಿಕಾಯಿ| ₹25| ₹40

ಕ್ಯಾರೆಟ್| ₹60| ₹90

ಬೀಟ್‌ರೂಟ್| ₹35| ₹50

ಬೆಂಡೆಕಾಯಿ| ₹45| ₹60

ತೊಂಡೆಕಾಯಿ| ₹45| ₹60

 

ಹಬ್ಬದ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ತರಕಾರಿಗಳ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯದ ದರ ಏರಿಕೆ ಗ್ರಾಹಕರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುವಂತಾಗಿದೆ.