20 September 2026 |

ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆ: ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್

  • 12 Sep 2026 10:30:51 AM

ನವದೆಹಲಿ: ಅಪ್ರಾಪ್ತ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದಕ್ಕೆ ನಿರ್ಬಂಧ ಹೇರಲು ಕಾನೂನು ರೂಪಿಸುವ ಸಾಧ್ಯತೆ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ.

 

ಮಕ್ಕಳನ್ನು ಆನ್‌ಲೈನ್ ಅಪಾಯಗಳಿಂದ ರಕ್ಷಿಸಲು ಅಗತ್ಯವಿರುವ ಡಿಜಿಟಲ್ ಭದ್ರತಾ ವ್ಯವಸ್ಥೆಗಳ ಕುರಿತು ಗಮನಹರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೊಯ್‌ಮಲ್ಯ ಬಾಗ್ನಿ ಹಾಗೂ ನ್ಯಾಯಮೂರ್ತಿ ವಿ.ಮೋಹನ್ ಅವರನ್ನೊಳಗೊಂಡ ಪೀಠವು, ಈ ಸಂಬಂಧ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆ ಎತ್ತಿದೆ.

 

ಭಾರತದಲ್ಲಿ ಅಪ್ರಾಪ್ತ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಸುರಕ್ಷತೆಗಾಗಿ ಸಮರ್ಪಕ ಕಾನೂನು ವ್ಯವಸ್ಥೆ ಇಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳು ಅಮೆರಿಕದ ನಿಯಮಗಳನ್ನು ಆಧರಿಸಿವೆ. ಅಲ್ಲಿನ ನಿಯಮಗಳ ಪ್ರಕಾರ 13 ವರ್ಷ ಮೇಲ್ಪಟ್ಟವರು ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

 

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಭಾರತದಲ್ಲಿ ಸೂಕ್ತ ರಕ್ಷಣಾ ಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಡಿಜಿಟಲ್ ಭದ್ರತೆಯನ್ನು ಬಲಪಡಿಸಲು ಅಗತ್ಯವಿರುವ ‘ಫೈರ್‌ವಾಲ್’ ವ್ಯವಸ್ಥೆಗಳ ಬಗ್ಗೆಯೂ ಪೀಠ ಉಲ್ಲೇಖಿಸಿದ್ದು, ಈ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವನ್ನು ತಿಳಿಸುವಂತೆ ಸೂಚಿಸಿದೆ.