ಮಂಗಳೂರು: ಹಸು ಕದ್ದು ಅಕ್ರಮವಾಗಿ ವಧೆ ಮಾಡಿದ ಆರೋಪದ ಮೇಲೆ ಪಣಂಬೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಫಹಾದ್ ಮತ್ತು ಮೊಹಮ್ಮದ್ ನೌಫಲ್ ಬಂಧಿತ ಆರೋಪಿಗಳು. ಕಸಬಾ ಬೆಂಗ್ರೆ ಗ್ರಾಮದ ಜುಮ್ಮಾ ಮಸೀದಿ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಸುಮಾರು ₹43,100 ಮೌಲ್ಯದ 143.8 ಕೆ.ಜಿ. ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಫಹಾದ್ ಅವರ ಮನೆಯ ಹಿಂಭಾಗದಲ್ಲಿ ಜಾನುವಾರು ವಧೆ ಮಾಡಿ ಮಾಂಸ ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಇನ್ನಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿಯ ವೇಳೆ ಮೂರು ಹಳದಿ ಬಣ್ಣದ ಚೀಲಗಳಲ್ಲಿ ತುಂಬಿಸಿಟ್ಟಿದ್ದ ದನದ ಚರ್ಮ, ಕಾಲುಗಳು, ಕಳೇಬರ, ಕೊಂಬು ಹಾಗೂ ತಲೆಯ ಭಾಗವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.





