ಮಂಗಳೂರು: ಗ್ರಾಮೀಣ ಕುಟುಂಬಗಳ ಆದಾಯ ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ DAY-NRLM ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಕೃಷಿ ಕ್ಲಸ್ಟರ್‌ಗಳ ಅನುಷ್ಠಾನದಲ್ಲಿ ರಾಜ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟು 27 ಸಮಗ್ರ ಕೃಷಿ ಕ್ಲಸ್ಟರ್‌ಗಳಿಗೆ ಅನುಮೋದನೆ ದೊರೆತಿದೆ. ಈ ಪೈಕಿ ಈಗಾಗಲೇ 3 ಕ್ಲಸ್ಟರ್‌ಗಳು ಕಾರ್ಯಾರಂಭ ಮಾಡಿದ್ದು, ಉಳಿದ ಕ್ಲಸ್ಟರ್‌ಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಹಂತ ಹಂತವಾಗಿ ಒದಗಿಸುವ ಕಾರ್ಯ ನಡೆಯುತ್ತಿದೆ.
ಕೃಷಿ ಚಟುವಟಿಕೆಗಳ ಜತೆಗೆ ಪಶುಸಂಗೋಪನೆ ಮತ್ತು ಕೃಷಿ ಆಧಾರಿತ ಸಣ್ಣ ಉದ್ಯಮಗಳನ್ನು ಒಟ್ಟಾಗಿ ಅಭಿವೃದ್ಧಿಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ.60 ಹಾಗೂ ರಾಜ್ಯ ಸರ್ಕಾರದಿಂದ ಶೇ.40ರಷ್ಟು ಅನುದಾನ ದೊರೆಯುತ್ತದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಯೋಜನೆಯಡಿ ಹಲವು ಚಟುವಟಿಕೆಗಳು ಆರಂಭವಾಗಿವೆ. ಸುಳ್ಯದಲ್ಲಿ ಬಾಳೆಕಾಂಡ ಮತ್ತು ನಾರಿನಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಬಂಟ್ವಾಳದಲ್ಲಿ ತೆಂಗಿನಕಾಯಿ ಸಿಪ್ಪೆ ಸಂಸ್ಕರಣೆ ಹಾಗೂ ಪುತ್ತೂರು–ನಿಡ್ಪಳ್ಳಿ ಭಾಗದಲ್ಲಿ ಗೋಮಯ ಪುಡಿ ತಯಾರಿಕೆ ನಡೆಯುತ್ತಿದೆ.
ಈ ಸಮಗ್ರ ಕೃಷಿ ವ್ಯವಸ್ಥೆಯಿಂದ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶ ದೊರೆಯುವ ನಿರೀಕ್ಷೆಯಿದ್ದು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೂ ಉದ್ಯೋಗ ಮತ್ತು ಸ್ವಾವಲಂಬನೆಗೆ ಹೊಸ ಅವಕಾಶಗಳು ಸಿಗಲಿವೆ.





