ಶಿರಸಿ: ಗಣಪತಿ ಹಬ್ಬದ ಸಂಭ್ರಮದ ನಡುವೆಯೇ ಈಜಲು ತೆರಳಿದ್ದ 17 ವರ್ಷದ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸುಗಾವಿ ಗ್ರಾಮದ ಭಟ್ಟರ ಕೆರೆಯಲ್ಲಿ ಸೆಪ್ಟೆಂಬರ್ 15ರಂದು ನಡೆದಿದೆ.
ಮೃತ ಯುವಕನನ್ನು ಸುಗಾವಿ ಗ್ರಾಮದ ನಿವಾಸಿ ಸುನಿಲ್ ಕೃಷ್ಣ ಚನ್ನಯ್ಯ (17) ಎಂದು ಗುರುತಿಸಲಾಗಿದೆ.
ಮಂಗಳವಾರ ಸುನಿಲ್ ಸೇರಿದಂತೆ ಮೂವರು ಯುವಕರು ಭಟ್ಟರ ಕೆರೆಗೆ ಈಜಲು ತೆರಳಿದ್ದರು. ಈಜುತ್ತಿದ್ದ ವೇಳೆ ಸುನಿಲ್ ನಡು ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ನಾಪತ್ತೆಯಾಗಿದ್ದಾನೆ. ಜೊತೆಗಿದ್ದ ಇಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಶಿರಸಿಯ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ಸ್ ತಂಡದ ಸದಸ್ಯರು ತಕ್ಷಣ ಸ್ಥಳಕ್ಕೆ ಆಗಮಿಸಿದರು. ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಕೆರೆಯಲ್ಲಿ ಶೋಧ ಕಾರ್ಯ ಆರಂಭಿಸಿದ ತಂಡ, ಸತತ ಪ್ರಯತ್ನದ ಬಳಿಕ ಸುನಿಲ್ ಅವರ ಮೃತದೇಹವನ್ನು ಪತ್ತೆಹಚ್ಚಿ ನೀರಿನಿಂದ ಹೊರತೆಗೆದಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಗೋಪಾಲ ಗೌಡ, ರಾಜು ಬಣಿಗಾರ, ಪವನ ಸಿರ್ಸಿ ಹಾಗೂ ನಾಗೇಶ ಕಬ್ಬೆ ಅವರು ಪ್ರಮುಖವಾಗಿ ಶ್ರಮಿಸಿದರು.
ಇತ್ತ ಬನವಾಸಿ ಪೊಲೀಸ್ ಠಾಣೆಯ ಪಿಎಸ್‌ಐ ಮಾಂತೇಶ ಕಮ್ಮಾರ್ ನೇತೃತ್ವದ ಪೊಲೀಸ್ ತಂಡ ಸ್ಥಳದಲ್ಲಿದ್ದು, ಘಟನೆಯ ಕುರಿತು ಪರಿಶೀಲನೆ ನಡೆಸಿತು.





