16 September 2026 |

ಮಂಗಳೂರಿನಲ್ಲಿ ಮಾರ್ಫ್ ಮಾಡಿದ ಫೋಟೋ ತೋರಿಸಿ ₹5.24 ಲಕ್ಷ ವಂಚನೆ ಆರೋಪ

  • 16 Sep 2026 10:35:16 AM

ಮಂಗಳೂರು: Instagram ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರು ಮಾರ್ಫ್ ಮಾಡಲಾದ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವುದಾಗಿ ಬೆದರಿಸಿ 19 ವರ್ಷದ ಯುವಕನಿಂದ ₹5.24 ಲಕ್ಷ ಹಣ ಪಡೆದಿರುವ ಆರೋಪ ಮಂಗಳೂರಿನಲ್ಲಿ ಕೇಳಿಬಂದಿದೆ.

 

ದೂರುದಾರ ಯುವಕನಿಗೆ Instagram ಮೂಲಕ ಸಂಪರ್ಕಿಸಿದ್ದ ಆರೋಪಿಯು, ಆತನ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ಮಾರ್ಫ್ ಮಾಡಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಆ ಚಿತ್ರಗಳನ್ನು ಕುಟುಂಬಸ್ಥರು ಹಾಗೂ ಪರಿಚಯಸ್ಥರಿಗೆ ಕಳುಹಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಆರೋಪಿಯ ಒತ್ತಡಕ್ಕೆ ಒಳಗಾದ ಯುವಕ ಹಲವು ಹಂತಗಳಲ್ಲಿ ಒಟ್ಟು ₹5.24 ಲಕ್ಷ ಹಣ ವರ್ಗಾಯಿಸಿದ್ದಾನೆ ಎನ್ನಲಾಗಿದೆ. ನಂತರವೂ ಹಣಕ್ಕೆ ಬೇಡಿಕೆ ಮುಂದುವರಿದ ಹಿನ್ನೆಲೆಯಲ್ಲಿ ಯುವಕ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.

 

ಈ ಸಂಬಂಧ ಮಂಗಳೂರು CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ವಂಚನೆಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರಿಂದ ಬರುವ ಸಂದೇಶಗಳು, ಫೋಟೋ ಹಾಗೂ ಹಣದ ಬೇಡಿಕೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.