17 September 2026 |

ಕುತ್ತಾರು ಅಪಘಾತ: ಮಿದುಳು ನಿಷ್ಕ್ರಿಯಗೊಂಡ 21 ವರ್ಷದ ಯುವಕನ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ

  • 16 Sep 2026 05:31:39 PM

ಮಂಗಳೂರು: ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡ 21 ವರ್ಷದ ಯುವಕನ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

 

ಕುತ್ತಾರುವಿನ ಆಯೆರೆಬೆಟ್ಟು ನಿವಾಸಿಗಳಾದ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ಅವರು ಅವಿವಾಹಿತರಾಗಿದ್ದು, ತಂದೆ-ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ.

 

ಸೋಮವಾರ ರಾತ್ರಿ ಸುಮಾರು 7.30ರ ವೇಳೆಗೆ ವರ್ಷಿತ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಬಳಿ ರಾಣಿಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಸ್ಕೂಟರ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ವರ್ಷಿತ್ ಅವರ ತಲೆಗೆ ಗಂಭೀರ ಗಾಯವಾಗಿತ್ತು.

 

ತಕ್ಷಣ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವೈದ್ಯರು ವರ್ಷಿತ್ ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ದೃಢಪಡಿಸಿದ್ದಾರೆ.

 

ಮಗನ ಸ್ಥಿತಿ ತಿಳಿದ ಬಳಿಕ ಪೋಷಕರು ವೈದ್ಯರ ಸಲಹೆಯಂತೆ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ವರ್ಷಿತ್ ಅವರ ಮೂತ್ರಪಿಂಡ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳನ್ನು ಅಗತ್ಯವಿರುವವರಿಗೆ ದಾನ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂಗಾಂಗಗಳನ್ನು ತ್ವರಿತವಾಗಿ ಸಾಗಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

 

ಇದೇ ಅಪಘಾತದಲ್ಲಿ ಸ್ಕೂಟರ್ ಸವಾರ ಧೀರಜ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.