18 September 2026 |

ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಅವಘಡ; ಕಡಬದ ಯುವ ಕಾರ್ಮಿಕ ಸಾವು

  • 17 Sep 2026 06:46:14 PM

ಬೆಳ್ತಂಗಡಿ: ಕಟ್ಟಡ ತೆರವುಗೊಳಿಸುವ ಕಾಮಗಾರಿ ವೇಳೆ ಸಿಮೆಂಟ್‌ನ ಬೃಹತ್ ಅವಶೇಷವೊಂದು ಕಾರ್ಮಿಕನ ಮೇಲೆ ಬಿದ್ದ ಪರಿಣಾಮ 22 ವರ್ಷದ ಯುವಕ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

 

ನಗರದ ಮೂರು ಮಾರ್ಗದ ಸಮೀಪ ಮಹಿಳಾ ಗ್ರಾಹಕರ ಸಹಕಾರಿ ಸಂಘಕ್ಕೆ ಸೇರಿದ ಕಟ್ಟಡವನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿತ್ತು. ಕಟ್ಟಡದ ಮೇಲ್ಭಾಗದಲ್ಲಿ ರಾಡ್‌ಗಳೊಂದಿಗೆ ಸಿಮೆಂಟ್‌ನ ಭಾಗಗಳನ್ನು ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

 

ಕೆಳಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನ ಮೇಲೆ ಏಕಾಏಕಿ ಸಿಮೆಂಟ್‌ನ ದೊಡ್ಡ ತುಂಡು ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಝುಬೈರ್ (22) ಅವರನ್ನು ಸ್ಥಳೀಯರು ಕೂಡಲೇ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.

 

ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸುವ ಮುನ್ನವೇ ಝುಬೈರ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 

ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.