19 September 2026 |

ನಿಯಂತ್ರಣ ತಪ್ಪಿ ಫ್ಲೈಓವರ್‌ನಿಂದ ಕೆಳಗೆ ಬಿದ್ದ ಕಾರು; ಮಹಿಳೆಗೆ ಗಂಭೀರ ಗಾಯ

  • 18 Sep 2026 03:18:30 PM

ಮಂಡ್ಯ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯ ಫ್ಲೈಓವರ್‌ನಿಂದ ಕೆಳಗೆ ಬಿದ್ದ ಘಟನೆ ಮಂಡ್ಯದ ಉಮ್ಮಡಹಳ್ಳಿ ಗೇಟ್ ಸಮೀಪ ಶುಕ್ರವಾರ (ಸೆ.18) ನಡೆದಿದೆ.

 

ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು ವೇಗದ ಕಾರಣ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಫ್ಲೈಓವರ್‌ನಿಂದ ಕೆಳಗೆ ಹಾರಿ ಅಂಡರ್‌ಪಾಸ್‌ಗೆ ಬಿದ್ದಿದೆ.

 

ಅಪಘಾತದಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಪತಿ ಹಾಗೂ ಮತ್ತೊಬ್ಬ ಸ್ನೇಹಿತ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಹಿಳೆಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಅಪಘಾತದ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಗೊಂಡ ಮಹಿಳೆಯ ಸ್ಥಿತಿಯನ್ನು ಕಂಡು ಅವರ ಪತಿ ಆತಂಕದಿಂದ ಗೋಳಾಡಿದ ದೃಶ್ಯ ಮನಕಲಕುವಂತಿತ್ತು.

 

ಮಾಹಿತಿ ಪಡೆದ ಮಂಡ್ಯ ಸೆಂಟ್ರಲ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.