ವಿಟ್ಲ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಯುವತಿಯ ಅಶ್ಲೀಲ ಚಿತ್ರಗಳನ್ನು ಬಳಸಿಕೊಂಡು ಬೆದರಿಕೆ ಹಾಕಿ ಸುಮಾರು 10 ಪವನ್ ಚಿನ್ನಾಭರಣ ಪಡೆದಿದ್ದಾನೆ ಎಂಬ ಆರೋಪದಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಸುಪ್ರೀತ್ ಗೌಡ ಯಾನೆ ಲತೀಶ್ ಗೌಡ ಎಂಬಾತ ಜುಲೈ ತಿಂಗಳಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಯುವತಿಗೆ ಪರಿಚಯವಾಗಿದ್ದಾನೆ ಎನ್ನಲಾಗಿದೆ. ಬಳಿಕ ಮೆಸೇಜ್ ಮೂಲಕ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡು, ಅಶ್ಲೀಲ ಚಿತ್ರಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿತ್ರಗಳನ್ನು ಪಡೆದ ಬಳಿಕ, ಯುವತಿಯ ಬಳಿಯಿದ್ದ ಚಿನ್ನಾಭರಣವನ್ನು ನೀಡುವಂತೆ ಆತ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಚಿನ್ನ ನೀಡದಿದ್ದರೆ ಆಕೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ನಂತರ ಯುವತಿ ತಿಳಿಸಿದ ಸ್ಥಳಕ್ಕೆ ತನ್ನ ಸ್ನೇಹಿತನೊಬ್ಬನನ್ನು ಕಳುಹಿಸಿ ಚಿನ್ನಾಭರಣ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಮತ್ತೆ ಚಿನ್ನಕ್ಕೆ ಬೇಡಿಕೆ ಇಟ್ಟಾಗ ಯುವತಿ ಈ ವಿಚಾರವನ್ನು ಕುಟುಂಬದವರ ಗಮನಕ್ಕೆ ತಂದಿದ್ದಾರೆ.
ಕುಟುಂಬಸ್ಥರು ಆತನನ್ನು ಸಂಪರ್ಕಿಸಿದಾಗ ಚಿನ್ನಾಭರಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾನೆ ಎನ್ನಲಾಗಿದ್ದು, ಬಳಿಕ ಚಿನ್ನವನ್ನು ವಾಪಸ್ ನೀಡದೆ ವಂಚಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





