ಉಡುಪಿ: ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಕುಂದರ್ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿ, ಸತ್ಯಾಂಶವನ್ನು ಹೊರತಂದು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಅವರ ಸಹೋದರ ಪ್ರಶಾಂತ್ ಕುಂದರ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಕಾಶ್ ಕುಂದರ್ ಹತ್ಯೆಯ ಬಳಿಕ ಅವರ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಹಾಗೂ ಪುತ್ರನ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಳಿಕ ಪತ್ನಿ ಹಾಗೂ ಪುತ್ರ ಭಾರತಕ್ಕೆ ಬಂದಿರುವ ಮಾಹಿತಿ ಇದ್ದರೂ, ಅವರು ಕುಟುಂಬದವರನ್ನು ಸಂಪರ್ಕಿಸಿಲ್ಲ ಎಂದು ಪ್ರಶಾಂತ್ ಕುಂದರ್ ಮನವಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯ ಭಾಗವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಕಾಶ್ ಕುಂದರ್ ಹತ್ಯೆಗೆ ಇತರರ ಸಹಾಯ ಪಡೆದಿರುವ ಸಾಧ್ಯತೆಯ ಬಗ್ಗೆಯೂ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದು, ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಅಲ್ಲದೆ, ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಅಗತ್ಯ ಸಹಕಾರ ಪಡೆದುಕೊಳ್ಳುವಂತೆ ಉಡುಪಿ ಎಸ್ಪಿಗೆ ಮನವಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ಹಾಗೂ ಅನುಮಾನಗಳು ತನಿಖೆಯಿಂದ ದೃಢಪಡಬೇಕಿದ್ದು, ಸದ್ಯಕ್ಕೆ ಇವು ಕುಟುಂಬದವರು ವ್ಯಕ್ತಪಡಿಸಿರುವ ಶಂಕೆಗಳಾಗಿವೆ.





