05 November 2026 |

ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗದ ವ್ಯಾಪ್ತಿಗೆ: ಅಧಿಕಾರಿಗಳಿಂದ ವ್ಯವಸ್ಥೆಗಳ ಪರಿಶೀಲನೆ

  • 02 Oct 2026 10:35:04 AM

ಮಂಗಳೂರು: ಈ ಹಿಂದೆ ಪಾಲಕ್ಕಾಡ್ ವಿಭಾಗದ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ರೈಲ್ವೆ ಪ್ರದೇಶ ಇದೀಗ ಮೈಸೂರು ವಿಭಾಗದ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಹೊಸ ಆಡಳಿತ ವ್ಯವಸ್ಥೆಯಡಿ ರೈಲ್ವೆ ಕಾರ್ಯಾಚರಣೆ ಆರಂಭಗೊಂಡಿದೆ.

 

ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಎಡಿಆರ್‌ಎಂ) ಶಮ್ಮಾಸ್ ಹಮೀದ್ ಅವರು ಬುಧವಾರ ರಾತ್ರಿ ಮಂಗಳೂರಿಗೆ ಭೇಟಿ ನೀಡಿ ರೈಲ್ವೆ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುವುದರ ಜೊತೆಗೆ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಲಾಯಿತು.

 

ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಹಾಗೂ ಜೋಕಟ್ಟೆ ಸೇರಿದಂತೆ ಪ್ರಮುಖ ರೈಲ್ವೆ ಕೇಂದ್ರಗಳಿಗೆ ಮೈಸೂರು ವಿಭಾಗದ ವಿವಿಧ ಶಾಖಾಧಿಕಾರಿಗಳೊಂದಿಗೆ ಅವರು ಭೇಟಿ ನೀಡಿದರು. ಈ ವೇಳೆ ನಿಲ್ದಾಣಗಳ ಕಾರ್ಯಾಚರಣಾ ಸಿದ್ಧತೆ, ಮೂಲಸೌಕರ್ಯ ಹಾಗೂ ಸಿಬ್ಬಂದಿ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು.

 

ರೈಲುಗಳ ಸಂಚಾರ ನಿರಂತರವಾಗಿ ನಡೆಯಲು ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಇತರ ಸೌಲಭ್ಯಗಳ ಬಗ್ಗೆಯೂ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು. ಹೊಸ ಆಡಳಿತಾತ್ಮಕ ವ್ಯವಸ್ಥೆಯಡಿ ರೈಲ್ವೆ ಸೇವೆಗಳಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.