05 November 2026 |

ದಕ್ಷಿಣ ಕನ್ನಡದ ಮುರ ಮಣ್ಣಿನಲ್ಲಿ ಬಾಕ್ಸೈಟ್ ಅಂಶ ಪತ್ತೆ: ಕೇಂದ್ರದ ತಂಡದಿಂದ ಪರಿಶೀಲನೆ

  • 07 Oct 2026 10:06:10 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಂಪದವು ವ್ಯಾಪ್ತಿಯ ಮುರ ಮಣ್ಣಿನಲ್ಲಿ ಬಾಕ್ಸೈಟ್ ಅಂಶ ಇರುವ ಸಾಧ್ಯತೆ ಪತ್ತೆಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಭೂವೈಜ್ಞಾನಿಕ ಸಮೀಕ್ಷೆ ಇಲಾಖೆಯ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಲಿದೆ.

 

ಮುರ ಮಣ್ಣಿನಲ್ಲಿ ಅಲ್ಯೂಮಿನಿಯಂ ಅಂಶ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಕೆಲವು ಕಡೆ ಬಾಕ್ಸೈಟ್ ಗ್ರೇಡ್ ಇರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ತಂಡ ಸುಮಾರು 6–7 ತಿಂಗಳ ಕಾಲ ಜಿಲ್ಲೆಯಲ್ಲಿ ಪ್ರಾಥಮಿಕ ಖನಿಜ ಅನ್ವೇಷಣೆ ನಡೆಸಿ, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಿದೆ.

 

ದಕ್ಷಿಣ ಕನ್ನಡದಲ್ಲಿ ಮುರ ಮಣ್ಣನ್ನು ವ್ಯಾಪಕವಾಗಿ ತೆಗೆಯಲಾಗುತ್ತಿದ್ದು, ಅದರ ಒಂದು ಭಾಗವನ್ನು ಇತರ ರಾಜ್ಯಗಳ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿದೆ. ಇದೀಗ ಬಾಕ್ಸೈಟ್ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುರ ಮಣ್ಣಿನ ಗಣಿಗಾರಿಕೆ ಮತ್ತು ಸಾಗಾಟದ ಕುರಿತು ಮತ್ತಷ್ಟು ಗಮನ ಹರಿಯುವ ಸಾಧ್ಯತೆ ಇದೆ.

 

ಕೇಂದ್ರದ ತಂಡದ ಪರಿಶೀಲನೆಯ ಬಳಿಕ ಮುರ ಮಣ್ಣಿನಲ್ಲಿ ನಿಜವಾಗಿಯೂ ಎಷ್ಟು ಪ್ರಮಾಣದ ಬಾಕ್ಸೈಟ್ ಅಂಶವಿದೆ ಎಂಬುದು ಸ್ಪಷ್ಟವಾಗಲಿದೆ.