ದುಬೈಯಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ “ದುಬೈ ಕನ್ನಡಿಗರ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ-2026” ಕಾರ್ಯಕ್ರಮವನ್ನು ನವೆಂಬರ್ 22ರಂದು ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ.
ಕರ್ನಾಟಕ ಸಂಘ ದುಬೈ ಆಯೋಜನೆಯಲ್ಲಿ ಹಾಗೂ ಕನ್ನಡಿಗರ ಕೂಟ ದುಬೈ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ದುಬೈ ಅಲ್ ಖುಸೈಸ್ನ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ನಲ್ಲಿ ನಡೆಯಲಿದೆ. “ಒಗ್ಗಟ್ಟಿನ ಒಲವಿನಿಂದ ಒಮ್ಮೂಡಿದ ಒಮ್ಮತದ ಉತ್ಸವ” ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಯುಎಇಯ ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡಿಗರ ಏಕತೆಯನ್ನು ಸಂಭ್ರಮಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ದುಬೈಯ ವಿವಿಧ ಕನ್ನಡ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಗೆ ಕರೆತರುವ ಮೂಲಕ “ಏಕತೆಯಲ್ಲಿ ಕರ್ನಾಟಕ” ಎಂಬ ಆಶಯವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ಇದಾಗಿದೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಡಾ. ರೊನಾಲ್ಡ್ ಕೊಲಾಸೊ ಅವರು ಎರಡೂ ಸಂಘಟನೆಗಳ ನಡುವಿನ ಸಮನ್ವಯದ ಉಸ್ತುವಾರಿ ವಹಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಎರಡೂ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಗಳ ಒಪ್ಪಂದಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. KNRI ಅಧ್ಯಕ್ಷ ಹಾಗೂ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಕೂಡ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದ್ದಾರೆ.
ಈ ವರ್ಷದಿಂದ ದುಬೈನಲ್ಲಿ “ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ”ವನ್ನು ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ವರ್ಷದ ಕಾರ್ಯಕ್ರಮವನ್ನು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಸಹಯೋಗಿ ಸಂಸ್ಥೆಯಾಗಿರುವ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ತಂಡ ಸಂಘಟನಾತ್ಮಕ ಸಹಕಾರ ನೀಡಲಿದೆ.
ಮುಂದಿನ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಆಯೋಜನೆಯನ್ನು ಕನ್ನಡಿಗರ ಕೂಟ ದುಬೈ, ಕರ್ನಾಟಕ ಸಂಘ ದುಬೈ ಸಹಯೋಗದೊಂದಿಗೆ ನಿರ್ವಹಿಸಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಗಿದೆ.
ಕಾರ್ಯಕ್ರಮದಲ್ಲಿ ಹಲವು ಗಣ್ಯ ಅತಿಥಿಗಳು, ಪ್ರಮುಖ ಭಾಷಣಕಾರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ. ಕರ್ನಾಟಕದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕರ್ನಾಟಕ ಹಾಗೂ ಯುಎಇಯ ಪ್ರತಿಭಾವಂತ ಕಲಾವಿದರು ತಮ್ಮ ಕಲಾ ಪ್ರದರ್ಶನಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘ ದುಬೈ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ದುಬೈ ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರಿಗೆ “ಸೇವಾ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅದೇ ರೀತಿ ಕನ್ನಡಿಗರ ಕೂಟ ದುಬೈ ವತಿಯಿಂದ ಹಲವು ವರ್ಷಗಳಿಂದ ಕರ್ನಾಟಕದ ಸಾಧಕರಿಗೆ ನೀಡಲಾಗುತ್ತಿರುವ “ಅಂತಾರಾಷ್ಟ್ರೀಯ ಕನ್ನಡ ರತ್ನ” ಪ್ರಶಸ್ತಿ ಹಾಗೂ ಮಧ್ಯಪ್ರಾಚ್ಯದ ಸಾಧಕರಿಗೆ ನೀಡಲಾಗುವ “ಡಾ. ಪುನೀತ್ ರಾಜ್ಕುಮಾರ್” ಪ್ರಮುಖ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು ಎಂದು ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ದುಬೈ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಮಿತ್ರರು ಯುಎಇ ಆಯೋಜಿಸುತ್ತಿರುವ ವಿಶ್ವದ ಅತಿದೊಡ್ಡ ಹೊರನಾಡ ಕನ್ನಡ ಪಾಠಶಾಲೆಯ 13ನೇ ವರ್ಷದ ಉಚಿತ ತರಗತಿಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ದುಬೈ ಉಪಾಧ್ಯಕ್ಷ ದಯಾ ಕಿರೋಡಿಯನ್ ಹಾಗೂ ಕನ್ನಡಿಗರ ಕೂಟ ದುಬೈ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಯಲ್ಲಿ BCCI ಅಧ್ಯಕ್ಷ ಹಿದಾಯತ್ ಅಡ್ಡೋರ್, ಕನ್ನಡಿಗರ ಕೂಟ ದುಬೈ ಮುಖ್ಯ ಸಲಹೆಗಾರ ಸಾದನ್ ದಾಸ್ ಹಾಗೂ ಕರ್ನಾಟಕ ಸಂಘ ದುಬೈ ಸಲಹೆಗಾರ ರೊನಾಲ್ಡ್ ಮಾರ್ಟಿಸ್ ಅವರು ಈ ಐತಿಹಾಸಿಕ ಬೆಳವಣಿಗೆಗೆ ಅಭಿನಂದನೆ ಸಲ್ಲಿಸಿದರು.
ಯುಎಇಯಾದ್ಯಂತ ನೆಲೆಸಿರುವ ಎಲ್ಲ ಕನ್ನಡಿಗರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡಿಗರ ಏಕತೆ ಹಾಗೂ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಈ ಮಹಾಸಂಭ್ರಮಕ್ಕೆ ಸಾಕ್ಷಿಯಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಒಟ್ಟಾಗಿ ಸೇರೋಣ – ಒಟ್ಟಾಗಿ ಸಂಭ್ರಮಿಸೋಣ.
ಕನ್ನಡದ ಕಂಪು, ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡಿಗರ ಏಕತೆಯನ್ನು ದುಬೈನಲ್ಲಿ ಮೊಳಗಿಸೋಣ.
ಜೈ ಕರ್ನಾಟಕ! ಜೈ ಕನ್ನಡ!
— ಜಂಟಿ ಪತ್ರಿಕಾ ಪ್ರಕಟಣೆ
ಕರ್ನಾಟಕ ಸಂಘ ದುಬೈ ಮತ್ತು ಕನ್ನಡಿಗರ ಕೂಟ ದುಬೈ





