05 November 2026 |

ಮಂಗಳೂರಿನಲ್ಲಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ; 48 ಗ್ರಾಂ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಾಂತರ

  • 09 Oct 2026 10:08:05 AM

ಮಂಗಳೂರು: ಆಟೋ ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಸುಮಾರು 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ ಅನ್ನು ಸುರಕ್ಷಿತವಾಗಿ ಮರಳಿಸುವ ಮೂಲಕ ಮಂಗಳೂರಿನ ಆಟೋ ಚಾಲಕ ಬಸವರಾಜ ಅವರು ಪ್ರಾಮಾಣಿಕತೆಗೆ ಉತ್ತಮ ಉದಾಹರಣೆಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

ಅಫ್ರಿಲಾ ಎಂಬ ಮಹಿಳೆ ಮಂಗಳೂರಿನ ಸುಲ್ತಾನ್ ಗೋಲ್ಡ್ ಮಳಿಗೆಯಲ್ಲಿ ಸುಮಾರು 48 ಗ್ರಾಂ ತೂಕದ ಹೊಸ ಚಿನ್ನದ ನೆಕ್ಲೇಸ್ ಖರೀದಿಸಿದ್ದರು. ಬಳಿಕ ಮನೆಗೆ ಹೋಗಲು ಬಸವರಾಜ ಅವರ ಆಟೋ ರಿಕ್ಷಾವನ್ನು ಹತ್ತಿದ್ದರು. ಮನೆ ತಲುಪಿದ ನಂತರ ಆಟೋದಿಂದ ಇಳಿದು ಹೋಗುವ ಸಂದರ್ಭದಲ್ಲಿ ಹೊಸ ಚಿನ್ನದ ಆಭರಣವಿದ್ದ ಬ್ಯಾಗ್‌ ಅನ್ನು ರಿಕ್ಷಾದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು. ಈ ಆಭರಣದ ಮೌಲ್ಯ ಲಕ್ಷಾಂತರ ರೂಪಾಯಿ ಎಂದು ತಿಳಿದುಬಂದಿದೆ.

 

ಪ್ರಯಾಣಿಕರು ತೆರಳಿದ ಸ್ವಲ್ಪ ಸಮಯದ ಬಳಿಕ ಆಟೋದ ಹಿಂಬದಿ ಸೀಟಿನಲ್ಲಿ ಬ್ಯಾಗ್ ಇರುವುದನ್ನು ಬಸವರಾಜ ಗಮನಿಸಿದ್ದಾರೆ. ಬ್ಯಾಗ್‌ನಲ್ಲಿ ಬೆಲೆಬಾಳುವ ಚಿನ್ನದ ಸರ ಇರುವುದನ್ನು ತಿಳಿದ ಅವರು, ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಅದರ ವಾರಸುದಾರರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

 

ಚಿನ್ನದ ಆಭರಣದ ಬಗ್ಗೆ ಯಾವುದೇ ಆಸೆ ಅಥವಾ ಆಮಿಷಕ್ಕೆ ಒಳಗಾಗದೆ, ಅದನ್ನು ಸುರಕ್ಷಿತವಾಗಿ ಕಾಪಾಡಿಕೊಂಡ ಬಸವರಾಜ ಅವರು ಸಂಬಂಧಪಟ್ಟ ಮಹಿಳೆಯನ್ನು ಪತ್ತೆಹಚ್ಚಿ ಬ್ಯಾಗ್ ಸಮೇತ ಚಿನ್ನದ ಸರವನ್ನು ಮರಳಿಸಿದ್ದಾರೆ. ಈ ಮೂಲಕ ತಮ್ಮ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಮೆರೆದಿದ್ದಾರೆ.

 

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಕಳೆದುಹೋಗಿದ್ದರಿಂದ ಆತಂಕಕ್ಕೊಳಗಾಗಿದ್ದ ಅಫ್ರಿಲಾ ಅವರಿಗೆ ಆಭರಣ ಮರಳಿ ಸಿಕ್ಕಿದ್ದರಿಂದ ನೆಮ್ಮದಿ ದೊರೆತಿದೆ. ಹಣ ಮತ್ತು ಬೆಲೆಬಾಳುವ ವಸ್ತುಗಳಿಗಿಂತ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮುಖ್ಯ ಎಂಬುದನ್ನು ಆಟೋ ಚಾಲಕ ಬಸವರಾಜ ಅವರ ನಡೆ ತೋರಿಸಿಕೊಟ್ಟಿದೆ. ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.