11 October 2026 |

ಮಂಗಳೂರು: ಎರಡು ತಿಂಗಳಲ್ಲಿ 43,200 ಮೆಟ್ರಿಕ್ ಟನ್ ಮೀನು ಇಳುವರಿ

  • 09 Oct 2026 10:57:03 AM

ಮಂಗಳೂರು: ಪ್ರಸಕ್ತ ಮೀನುಗಾರಿಕೆ ಋತು ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಹವಾಮಾನ ವೈಪರೀತ್ಯದ ಆತಂಕದ ನಡುವೆಯೂ ಮೀನುಗಾರಿಕೆಯಿಂದ ಸಮಾಧಾನಕರ ಇಳುವರಿ ದೊರೆತಿದೆ. ಆರಂಭಿಕ ಹಂತದಲ್ಲಿ ಉತ್ತಮ ಪ್ರಮಾಣದಲ್ಲಿ ಮೀನು ಲಭ್ಯವಾಗಿರುವುದು ಮೀನುಗಾರರಲ್ಲಿ ಆಶಾವಾದ ಮೂಡಿಸಿದೆ.

 

ಎರಡು ತಿಂಗಳ ಮೀನುಗಾರಿಕೆ ನಿಷೇಧ ಮುಗಿದ ಬಳಿಕ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಬೋಟ್‌ಗಳು ಸಮುದ್ರಕ್ಕೆ ತೆರಳುತ್ತವೆ. ಈ ಬಾರಿಯೂ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಬಹುತೇಕ ಬೋಟ್‌ಗಳಿಗೆ ಮೀನು ಸಿಕ್ಕಿದೆ. ಮುಂದಿನ ಎರಡು–ಮೂರು ತಿಂಗಳೂ ಇದೇ ರೀತಿಯ ಇಳುವರಿ ಮುಂದುವರಿದರೆ ಈ ವರ್ಷದ ಮೀನುಗಾರಿಕೆ ಋತು ಉತ್ತಮವಾಗಿರಲಿದೆ ಎಂದು ಮೀನುಗಾರ ಮೋಹನ್ ಬೆಂಗ್ರೆ ಅಭಿಪ್ರಾಯಪಟ್ಟಿದ್ದಾರೆ.

 

ಪರ್ಸಿನ್ ಬೋಟ್‌ಗಳಿಗೆ ಬೂತಾಯಿ ಮತ್ತು ಬಂಗುಡೆ ಮೀನುಗಳು ದೊರೆಯುತ್ತಿದ್ದರೆ, ಟ್ರಾಲ್ ಬೋಟ್‌ಗಳಲ್ಲಿ ಕಪ್ಪೆ ಬೊಂಡಾಸ್, ಡಿಸ್ಕೋ, ಮುರು ಮತ್ತು ಪಾಂಬೋಲ್ ಸೇರಿದಂತೆ ವಿವಿಧ ಮೀನುಗಳು ಸಿಗುತ್ತಿವೆ. ಸಣ್ಣ ಬೋಟ್‌ಗಳ ಮೀನುಗಾರರಿಗೆ ಸಿಗಡಿ ಹಾಗೂ ಮಾಂಜಿ ಮೀನುಗಳು ಲಭ್ಯವಾಗುತ್ತಿವೆ.

 

ಸೆಪ್ಟೆಂಬರ್‌ನಲ್ಲಿ 25,200 ಮೆಟ್ರಿಕ್ ಟನ್ ಮೀನು

ಮೀನುಗಾರಿಕೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಋತುವಿನ ಆಗಸ್ಟ್‌ನಲ್ಲಿ 18,000 ಮೆಟ್ರಿಕ್ ಟನ್ ಮತ್ತು ಸೆಪ್ಟೆಂಬರ್‌ನಲ್ಲಿ 25,200 ಮೆಟ್ರಿಕ್ ಟನ್ ಮೀನು ದೊರೆತಿದೆ. ಈ ಎರಡು ತಿಂಗಳ ಒಟ್ಟು ಇಳುವರಿ 43,200 ಮೆಟ್ರಿಕ್ ಟನ್ ಆಗಿದೆ.

 

ಹಿಂದಿನ ವರ್ಷಗಳ ಇದೇ ಅವಧಿಯ ಅಂಕಿಅಂಶಗಳಿಗೆ ಹೋಲಿಸಿದರೆ ಈ ಬಾರಿ ಇಳುವರಿ ಕಡಿಮೆಯಾಗಿದೆ. 2025ರಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಒಟ್ಟು 53,757 ಮೆಟ್ರಿಕ್ ಟನ್ ಮೀನು ಲಭ್ಯವಾಗಿತ್ತು. 2024ರಲ್ಲಿ 45,050 ಮೆಟ್ರಿಕ್ ಟನ್ ಹಾಗೂ 2023ರಲ್ಲಿ 44,024 ಮೆಟ್ರಿಕ್ ಟನ್ ಮೀನು ದೊರೆತಿತ್ತು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 

ವಾರ್ಷಿಕ ಮೀನು ಉತ್ಪಾದನೆಯಲ್ಲೂ ಏರಿಕೆ

ಮೀನುಗಾರಿಕೆ ಇಲಾಖೆಯ ವಾರ್ಷಿಕ ಅಂಕಿಅಂಶಗಳ ಪ್ರಕಾರ, 2024–25ನೇ ಸಾಲಿನಲ್ಲಿ 2,220 ಕೋಟಿ ರೂ. ಮೌಲ್ಯದ 1,71,795 ಮೆಟ್ರಿಕ್ ಟನ್ ಮೀನು ಲಭ್ಯವಾಗಿತ್ತು. 2025–26ನೇ ಸಾಲಿನಲ್ಲಿ ಈ ಪ್ರಮಾಣ 1,97,381 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದ್ದು, ಅದರ ಮೌಲ್ಯ 3,856 ಕೋಟಿ ರೂ. ಎಂದು ದಾಖಲಾಗಿದೆ.

 

ವಾರ್ಷಿಕ ಮೀನು ಉತ್ಪಾದನೆ ಮತ್ತು ಅದರ ಮೌಲ್ಯದಲ್ಲಿ ಕಂಡುಬಂದಿರುವ ಏರಿಕೆಯ ಹಿನ್ನೆಲೆಯಲ್ಲಿ, ಪ್ರಸಕ್ತ ಮೀನುಗಾರಿಕೆ ಋತುವಿನಲ್ಲಿಯೂ ಉತ್ತಮ ಇಳುವರಿ ದೊರೆಯುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.