ಮುಂಬೈ: ಯುಎಇಯ ಖ್ಯಾತ ಉದ್ಯಮಿ ಹಾಗೂ ಎನ್ಎಂಸಿ ಹೆಲ್ತ್ಕೇರ್ ಸಂಸ್ಥೆಯ ಸ್ಥಾಪಕ ಡಾ. ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ಧ 15 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹1.44 ಲಕ್ಷ ಕೋಟಿ) ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ.
ಬ್ಯಾಂಕ್ನಲ್ಲಿ ಹಣಕಾಸು ವಂಚನೆ ನಡೆದಿದೆ, ತಮ್ಮ ಹೆಸರಿನಲ್ಲಿರುವ ಕೆಲವು ದಾಖಲೆಗಳಲ್ಲಿ ನಕಲಿ ಸಹಿಗಳನ್ನು ಬಳಸಲಾಗಿದೆ ಹಾಗೂ ಅನುಮಾನಾಸ್ಪದ ಹಣ ವರ್ಗಾವಣೆಗಳ ಕುರಿತು ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ. ಈ ಸಂಬಂಧ ಬ್ಯಾಂಕ್ನ ಕೆಲವು ಹಾಲಿ ಮತ್ತು ಮಾಜಿ ಅಧಿಕಾರಿಗಳು ಸೇರಿದಂತೆ 26 ಪ್ರತಿವಾದಿಗಳನ್ನು ಮೊಕದ್ದಮೆಯಲ್ಲಿ ಹೆಸರಿಸಲಾಗಿದೆ ಎಂದು ವರದಿಯಾಗಿದೆ.
ಶೆಟ್ಟಿ ಅವರು ನೇರ ಆರ್ಥಿಕ ನಷ್ಟ, ವ್ಯವಹಾರ ನಷ್ಟ ಹಾಗೂ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂಬ ಕಾರಣಗಳಿಗೆ ತಲಾ 5 ಬಿಲಿಯನ್ ಡಾಲರ್ನಂತೆ ಒಟ್ಟು 15 ಬಿಲಿಯನ್ ಡಾಲರ್ ಪರಿಹಾರ ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾ, ಮೊಕದ್ದಮೆಯ ಅಧಿಕೃತ ಪ್ರತಿ ಇನ್ನೂ ತಲುಪಿಲ್ಲ ಎಂದು ತಿಳಿಸಿದೆ. ಪ್ರತಿ ದೊರೆತ ಬಳಿಕ ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಬ್ಯಾಂಕ್ ಹೇಳಿದೆ.
ಎನ್ಎಂಸಿ ಹೆಲ್ತ್ಕೇರ್ ಸಂಸ್ಥೆಯ ಹಣಕಾಸು ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ವಿವಾದಗಳು ಉಂಟಾಗಿದ್ದವು. ಇದೀಗ ಬಿಆರ್ ಶೆಟ್ಟಿ ಅವರು ಸಲ್ಲಿಸಿರುವ ಹೊಸ ಮೊಕದ್ದಮೆ ಮತ್ತೊಮ್ಮೆ ಗಮನ ಸೆಳೆದಿದೆ. ಪ್ರಕರಣದಲ್ಲಿನ ಆರೋಪಗಳು ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗಿಲ್ಲ.





