ಮಂಗಳೂರು: ನಗರದ ಮದುವೆ ಸಮಾರಂಭವೊಂದರಲ್ಲಿ ಪುಟ್ಟ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವಾಗಿರುವ ಘಟನೆ ವರದಿಯಾಗಿದೆ. ಮೂರೂವರೆ ವರ್ಷದ ಮಗುವಿಗೆ ಸೇರಿದ ಸುಮಾರು ₹1.35 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ಮಹಿಳೆಯೊಬ್ಬರು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮದುವೆ ಕಾರ್ಯಕ್ರಮದಲ್ಲಿ ಮಗು ಐಸ್‌ಕ್ರೀಂ ತರಲು ಊಟದ ಸ್ಥಳಕ್ಕೆ ತೆರಳಿತ್ತು. ಅಲ್ಲಿಂದ ವಾಪಸ್ ಬಂದಾಗ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಾಣೆಯಾಗಿರುವುದು ಕುಟುಂಬದವರ ಗಮನಕ್ಕೆ ಬಂದಿದೆ. ಬಳಿಕ ಸಮಾರಂಭದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಗುವಿನ ಚಿನ್ನದ ಸರವನ್ನು ಕದ್ದಿದ್ದಾರೆ ಎನ್ನಲಾದ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





