Weather Forecast, ಮೇ, 14: ಅಂಡಮಾನ್, ನಿಕೋಬಾರ್ ಹಾಗೂ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದ್ದು, ದೇಶದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಪ್ರವಾಹದಂತಹ ಮಳೆಯಾಗುವ ಸಾಧ್ಯತೆಯಿದೆ ಎಂದು ಸಂದೇಶವನ್ನು ಭಾರತೀಯ ಹವಾಮಾನ ಇಲಾಖೆ ರವಾನೆ ಮಾಡಿದೆ.
ಭಾರತದ ಹವಾಮಾನ ಇಲಾಖೆ ಪ್ರಕಾರ, ಈ ವರ್ಷ ಮೇ 14ರಿಂದ ಅಧಿಕೃತವಾಗಿ ನೈಋತ್ಯ ಮಾನ್ಸೂನ್ ಆರಂಭವಾಗಿದೆ, ಇದು ಅವಧಿಗೂ ಮುನ್ನ ಆರಂಭವಾಗಲಿರುವ ಮಾನ್ಸೂನ್ ಎಂದು ಹೇಳಿದೆ.
ಮೇ 16ರಿಂದ 26ರ ವರೆಗೂ ಈ ಚಂಡಮಾರುತದ ಪ್ರಭಾವ ಇರುವುದರಿಂದ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಹವಾಮಾನ ಇಲಾಖೆ ತಜ್ಞರು ಒಂದು ವೇಳೆ ಚಂಡಮಾರುತದ ಅಲೆಗಳು ತೀವ್ರಗೊಂಡರೆ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿದ್ದಾರೆ.
ಕರ್ನಾಟಕದ ಈ ಭಾಗಗಳಲ್ಲಿ ಯಲ್ಲೋ ಅಲರ್ಟ್
ಕರ್ನಾಟಕದ ಹಲವಾರು ಭಾಗಗಳಿಗೆ ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ತುಮಕೂರು, ಬಾಗಲಕೋಟೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮುಂಜಾಗೃತಾ ಕ್ರಮವಾಗಿ ಮೇ 16ರ ವರೆಗೆ ಯೆಲ್ಲೋ ಅಲರ್ಟ್ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನಿತರ ರಾಜ್ಯಗಳ ಜೊತೆಗೆ ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ.
ಆಂಧ್ರಪ್ರದೇಶ, ಕೇರಳ ಮತ್ತು ಮಾಹೆ, ಮಧ್ಯ ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಭೀಕರ ಮಳೆ ಸುರಿದರೆ ಕರ್ನಾಟಕದ ಕರಾವಳಿ ಭಾಗದಲ್ಲೂ ಮುಂದಿನ 5 ದಿನಗಳಲ್ಲಿ ಅತೀ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಲಾಗಿದೆ. ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿಯಲ್ಲಿ ಮಳೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಸುರುದಿದೆ. ದಕ್ಷಿಣ ಕನ್ನಡದ ಹಲವು ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಬಂಟ್ವಾಳ ತಾಲೂಕಿನ ಕೆಲವೆಡೆ ಮಳೆಯಾದರೆ, ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ರಸ್ತೆಯ ಮೇಲೆಯೇ ನೀರು ಹರಿದು ಹೋಗಿದೆ ಎಂದು ವರದಿಯಾಗಿದೆ. ಕೆಲವೆಡೆ ವಿದ್ಯುತ್ ಸಂಪರ್ಕಕ್ಕೂ ಅಡ್ಡಿಯಾಗಿದೆ ಎಂದು ತಿಳಿಸಲಾಗಿದೆ.