ಉಡುಪಿ: ಜಿಲ್ಲೆಯ ಕೋಟ ಅಮೃತೇಶ್ವರೀ ಸರ್ಕಲ್ ಬಳಿ ಸೋಮವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 65 ವರ್ಷದ ಗುರುದಾಸ್ ಶೆಣೈ ಮೃತಪಟ್ಟಿದ್ದಾರೆ. ಕಾರ್ಪೊರೇಷನ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯಾಗಿದ್ದ ಅವರು ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಗುರುದಾಸ್ ಶೆಣೈ ಅವರು ಪ್ರತಿದಿನ ಬೆಳಗಿನ ಜಾವ ಸ್ಥಳೀಯ ಪರಿಸರದಲ್ಲಿ ಹೂವುಗಳನ್ನು ಸಂಗ್ರಹಿಸಿ ದೇವಸ್ಥಾನಕ್ಕೆ ಅರ್ಪಿಸುವ ಅಭ್ಯಾಸ ಹೊಂದಿದ್ದರು. ಎಂದಿನಂತೆ ಸೋಮವಾರವೂ ಹೂವುಗಳನ್ನು ಸಂಗ್ರಹಿಸಿಕೊಂಡು ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ, ಉಡುಪಿಯಿಂದ ಕುಂದಾಪುರದ ಕಡೆಗೆ ತೆರಳುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ ಕಾರು ಚಾಲಕ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಅವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮೃತ ಗುರುದಾಸ್ ಶೆಣೈ ಅವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಆರ್‌ಎಸ್‌ಎಸ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಯುವ ಸ್ವಯಂಸೇವಕರಿಗೆ ಶಾಖೆಗಳನ್ನು ನಡೆಸಿಕೊಡುವ ಮೂಲಕ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಭಾನುವಾರ ಕೋಟದಲ್ಲಿ ನಡೆದ ವಿಜಯದಶಮಿ ಪಥಸಂಚಲನದಲ್ಲಿಯೂ ಅವರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಪಘಾತದ ಮಾಹಿತಿ ತಿಳಿದು ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





