ಬೆಂಗಳೂರು: ಹಲಸೂರು ಪ್ರದೇಶದಲ್ಲಿರುವ ಐಷಾರಾಮಿ ಕಾನ್ರಾಡ್ ಪಂಚತಾರಾ ಹೋಟೆಲ್‌ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೋಟೆಲ್‌ನ ಈಜುಕೊಳದಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತರನ್ನು ಜರ್ಮನಿಯ 57 ವರ್ಷದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೈಸ್ ಹಾಗೂ ಸ್ಲೋವಾಕಿಯಾದ 45 ವರ್ಷದ ಜುರಾಜ್ ಹೋರ್ವಾಟ್ ಎಂದು ಗುರುತಿಸಲಾಗಿದೆ.
ಘಟನೆ ವೇಳೆ ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದ ಅಮೆರಿಕದ ಪ್ರಜೆ ಹಾಗೂ ಹೋಟೆಲ್‌ನ ಸಿಬ್ಬಂದಿಗೂ ವಿದ್ಯುತ್ ಆಘಾತ ತಗುಲಿ ಗಾಯಗಳಾಗಿವೆ. ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅವಘಡಕ್ಕೆ ನಿಖರವಾದ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.





