ಮಂಗಳೂರು: ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯ ಸೇವೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಕರಾವಳಿ ಭಾಗದ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಹೆಗ್ಗಳಿಕೆ ತಂದಿದೆ.
ಆಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ಸುಧಾರಿತ ಚಿಕಿತ್ಸಾ ವಿಧಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಾಯಿ ಮತ್ತು ಶಿಶುಗಳ ಮರಣ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಆಸ್ಪತ್ರೆ ಗಮನಾರ್ಹ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ (Ipas Foundation) ಜಂಟಿಯಾಗಿ ನಡೆಸಿದ ಮೌಲ್ಯಮಾಪನದಲ್ಲಿ ಆಸ್ಪತ್ರೆಯ ಕಾರ್ಯವೈಖರಿಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
2025-26ನೇ ಆರ್ಥಿಕ ಸಾಲಿನಲ್ಲಿ ಕಾನೂನುಬದ್ಧ ಗರ್ಭಪಾತ ಮತ್ತು ಗರ್ಭಪಾತದ ನಂತರದ ಆರೈಕೆ ಸೇವೆಗಳಲ್ಲಿ ಶೇಕಡಾ 100ರಷ್ಟು ತಾಯಂದಿರಿಗೆ ಸುರಕ್ಷಿತ ಆರೋಗ್ಯ ಸೇವೆ ಒದಗಿಸುವ ಮೂಲಕ ಆಸ್ಪತ್ರೆ ವಿಶೇಷ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಶೂನ್ಯ ತಾಯಿ ಮರಣ ಪ್ರಮಾಣವನ್ನು ಕಾಯ್ದುಕೊಂಡಿರುವುದು ಆಸ್ಪತ್ರೆಯ ಸಾಧನೆಗೆ ಸಾಕ್ಷಿಯಾಗಿದೆ.
ಈ ಮಹತ್ವದ ಸಾಧನೆಯೊಂದಿಗೆ ಲೇಡಿಗೋಷನ್ ಆಸ್ಪತ್ರೆ ರಾಜ್ಯದ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.





