ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಮೀನುಗಾರನನ್ನು ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ನವೆಂಬರ್ 1, 2026ರಂದು ಮಂಗಳೂರಿನ ಕರಾವಳಿಯಿಂದ ಸುಮಾರು 54 ನಾಟಿಕಲ್ ಮೈಲಿ (100 ಕಿಲೋಮೀಟರ್) ದೂರದಲ್ಲಿ ಮಧ್ಯರಾತ್ರಿ ಈ ತುರ್ತು ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಕೋಸ್ಟ್ ಗಾರ್ಡ್ ಮಾಹಿತಿಯ ಪ್ರಕಾರ, ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 'ಶಿವ್ ಸಾಗರ್' ಹೆಸರಿನ ಮೀನುಗಾರಿಕಾ ದೋಣಿಯಿಂದ ವಿಎಚ್‌ಎಫ್ (VHF) ರೇಡಿಯೋ ಮೂಲಕ ತುರ್ತು ಸಂದೇಶ ರವಾನೆಯಾಗಿತ್ತು. ದೋಣಿಯಲ್ಲಿದ್ದ ಮೀನುಗಾರನೊಬ್ಬ ಸಮುದ್ರಕ್ಕೆ ಹಾಕಿದ್ದ ಬಲೆಗಳನ್ನು ಮೇಲಕ್ಕೆ ಎಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದನು.
ತಕ್ಷಣ ಎಚ್ಚೆತ್ತ ದೋಣಿಯಲ್ಲಿದ್ದ ಇತರ ಮೀನುಗಾರರು ಆತನನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ನೀರಿಗೆ ಬಿದ್ದ ಪರಿಣಾಮ ಆತನ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿದ್ದು, ತುರ್ತು ವೈದ್ಯಕೀಯ ನೆರವಿನ ಅಗತ್ಯ ಎದುರಾಗಿತ್ತು.
ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ, ಅಸ್ವಸ್ಥ ಮೀನುಗಾರನನ್ನು ಸುರಕ್ಷಿತವಾಗಿ ತಮ್ಮ ನೌಕೆಗೆ ಸ್ಥಳಾಂತರಿಸಿದರು. ಬಳಿಕ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ನೌಕೆಯ ಮೂಲಕ ಮಂಗಳೂರಿನತ್ತ ಕರೆತರಲಾಯಿತು.
ನವ ಮಂಗಳೂರು ಬಂದರು ಪ್ರಾಧಿಕಾರದ ಜೆಟ್ಟಿಗೆ ನೌಕೆ ತಲುಪುತ್ತಿದ್ದಂತೆ ಸಿದ್ಧವಾಗಿದ್ದ ಆಂಬುಲೆನ್ಸ್ ಮೂಲಕ ಮೀನುಗಾರನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಯಿತು.
ಮಧ್ಯರಾತ್ರಿ ಆಳ ಸಮುದ್ರದಲ್ಲಿ ಎದುರಾದ ತುರ್ತು ಪರಿಸ್ಥಿತಿಯಲ್ಲಿ ತ್ವರಿತವಾಗಿ ಸ್ಪಂದಿಸಿ ಮೀನುಗಾರನ ಜೀವ ಉಳಿಸಲು ನೆರವಾದ ಭಾರತೀಯ ಕರಾವಳಿ ಕಾವಲು ಪಡೆಯ ಕಾರ್ಯಾಚರಣೆಗೆ ಮೀನುಗಾರಿಕಾ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.





