ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಜಿಂಬಾಬೈ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ದಾಖಲಿಸಿದ ಆಟಗಾರ ಎಂಬ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.
15 ವರ್ಷ 118 ದಿನಗಳ ವಯಸ್ಸಿನಲ್ಲೇ ಈ ಸಾಧನೆ ಮಾಡಿದ ವೈಭವ್, ತಮ್ಮ ಆಕರ್ಷಕ ಇನ್ನಿಂಗ್ಸ್‌ನ ನೆರವಿನಿಂದ ಭಾರತ ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ಈ ಜಯವು ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತಕ್ಕೆ ದೊರೆತ ಮೊದಲ ಟಿ20 ವಿಜಯವೂ ಆಗಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬೈ, ನಿಗದಿತ 20 ಓವರ್‌ಗಳಲ್ಲಿ 125 ರನ್ ಗಳಿಸಿತು. 126 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಕೇವಲ 13.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು.
ಟಿ20 ಇತಿಹಾಸದಲ್ಲೇ ಕಿರಿಯ ಅರ್ಧಶತಕ ವೀರ
ಈ ಅರ್ಧಶತಕದೊಂದಿಗೆ ವೈಭವ್ ಸೂರ್ಯವಂಶಿ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ 2021ರಲ್ಲಿ ಮಾಲ್ಟಾ ವಿರುದ್ಧ 16 ವರ್ಷ 56 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ್ದ ಜಿಬ್ರಾಲ್ಟರ್‌ನ ಲೂಯಿಸ್ ಬ್ರೂಸ್ ಅವರ ದಾಖಲೆ ಇತಿಹಾಸವಾಗಿದೆ.
ಇದಕ್ಕೂ ಮೊದಲು ಪೂರ್ಣ ಸದಸ್ಯ ರಾಷ್ಟ್ರಗಳ ಪರ ಟಿ20ಐ ಅರ್ಧಶತಕ ಗಳಿಸಿದ ಕಿರಿಯ ಆಟಗಾರ ಎಂಬ ದಾಖಲೆ ಅಫ್ಘಾನಿಸ್ತಾನದ ವಿಕೆಟ್ ಕೀಪರ್-ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಹೆಸರಿನಲ್ಲಿತ್ತು. ಅವರು 2019ರಲ್ಲಿ ಜಿಂಬಾಬೈ ವಿರುದ್ಧ 17 ವರ್ಷ 96 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಹೊಸ ಮೈಲಿಗಲ್ಲು
126 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ವೈಭವ್ ಸೂರ್ಯವಂಶಿ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಕೇವಲ 19 ಎಸೆತಗಳಲ್ಲಿ 50 ರನ್ ಗಳಿಸಿದರು.
ಈ ಇನ್ನಿಂಗ್ಸ್‌ನೊಂದಿಗೆ 15 ವರ್ಷ 118 ದಿನಗಳ ವಯಸ್ಸಿನಲ್ಲೇ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವದಾಖಲೆಯನ್ನೂ ಅವರು ನಿರ್ಮಿಸಿದರು. ಇದುವರೆಗೆ ಈ ದಾಖಲೆ ನೇಪಾಳದ ಕುಶಾಲ್ ಮಲ್ಲಾ ಹೆಸರಿನಲ್ಲಿದ್ದು, ಅವರು 2020ರಲ್ಲಿ ಅಮೆರಿಕ ವಿರುದ್ಧದ ಏಕದಿನ ಪಂದ್ಯದಲ್ಲಿ 15 ವರ್ಷ 340 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ್ದರು.
ಇದರ ಜೊತೆಗೆ, ಪೂರ್ಣ ಸದಸ್ಯ ರಾಷ್ಟ್ರಗಳ ಆಟಗಾರರ ಪೈಕಿ ಅತಿ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿದ ದಾಖಲೆ ಕೂಡ ವೈಭವ್ ಹೆಸರಿಗೆ ಸೇರಿದೆ. ಈ ಮೂಲಕ 16 ವರ್ಷ 213 ದಿನಗಳ ವಯಸ್ಸಿನಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಅಂತಾರಾಷ್ಟ್ರೀಯ ಅರ್ಧಶತಕ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅವರು ಹಿಂದಿಕ್ಕಿದ್ದಾರೆ.





