ಒಂಟಾರಿಯೊ: ಭಾರತದ ಯುವ ಸ್ಕ್ವಾಶ್ ಆಟಗಾರ್ತಿ ಅನಾಹತ್ ಸಿಂಗ್ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್-2026ರಲ್ಲಿ ಪ್ರಶಸ್ತಿ ಗೆದ್ದು ದೇಶಕ್ಕೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮೂಲಕ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಅಪೂರ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
18 ವರ್ಷದ ದೆಹಲಿ ಮೂಲದ ಅನಾಹತ್, ಕೆನಡಾದ ಒಂಟಾರಿಯೊ ಪ್ರಾಂತ್ಯದ ನಯಾಗರಾ-ಆನ್-ದಿ-ಲೇಕ್‌ನಲ್ಲಿ ನಡೆದ ಮಹಿಳೆಯರ ಫೈನಲ್‌ನಲ್ಲಿ ಈಜಿಪ್ಟ್‌ನ ಎರಡನೇ ಶ್ರೇಯಾಂಕದ ರುಕಯ್ಯ ಸೇಲಂ ವಿರುದ್ಧ ಸತತ ಮೂರು ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಅವರು 11-3, 11-7 ಹಾಗೂ 11-9 ಅಂತರದಲ್ಲಿ ಎದುರಾಳಿಯನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದ ಹಾಗೂ ವಿಶ್ವ ರ‍್ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿರುವ ಅನಾಹತ್, ಆರಂಭದಿಂದಲೇ ಪ್ರಾಬಲ್ಯ ಮೆರೆದರು. ಈ ಜಯದೊಂದಿಗೆ ಜೂನಿಯರ್ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಮುಂದುವರಿದಿದ್ದ ಈಜಿಪ್ಟ್‌ನ ಪ್ರಾಬಲ್ಯಕ್ಕೂ ತೆರೆ ಬಿದ್ದಿದೆ.
ಇದರ ಜೊತೆಗೆ, 2010ರಲ್ಲಿ ಅಮೆರಿಕದ ಅಮಂಡಾ ಸೋಭಿ ಪ್ರಶಸ್ತಿ ಗೆದ್ದ ಬಳಿಕ ಮಹಿಳಾ ವಿಶ್ವ ಜೂನಿಯರ್ ಸ್ಕ್ವಾಶ್ ಕಿರೀಟವನ್ನು ಗೆದ್ದ ಮೊದಲ ಈಜಿಪ್ಟ್ ಹೊರಗಿನ ಆಟಗಾರ್ತಿ ಎಂಬ ವಿಶೇಷ ದಾಖಲೆಯನ್ನೂ ಅನಾಹತ್ ನಿರ್ಮಿಸಿದ್ದಾರೆ. 2011ರಿಂದ ಸತತವಾಗಿ ಈಜಿಪ್ಟ್ ಆಟಗಾರ್ತಿಯರೇ ಗೆಲ್ಲುತ್ತಿದ್ದ ಸರಣಿಗೆ ಅವರು ಅಂತ್ಯ ಹಾಡಿದ್ದಾರೆ.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಅನಾಹತ್, ಈಜಿಪ್ಟ್‌ನ ಬಾರ್ಬ್ ಸಮೇಹ್ ಅವರನ್ನು ನಾಲ್ಕು ಗೇಮ್‌ಗಳ ಕಠಿಣ ಪೈಪೋಟಿಯಲ್ಲಿ ಮಣಿಸಿದ್ದರು. ಇದರೊಂದಿಗೆ ಕಳೆದ 21 ವರ್ಷಗಳಲ್ಲಿ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದರು.





