2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದಿದೆ. ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಅನುಭವಿ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಚಿನ್ನದ ಪದಕ ಜಯಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಸ್ಪರ್ಧೆಯ ವೇಳೆ ಮೀರಾಬಾಯಿ ಚಾನು 85 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ಹೊಸ ದಾಖಲೆಯನ್ನು ನಿರ್ಮಿಸಿದರು. ಮೊದಲ ಪ್ರಯತ್ನದಲ್ಲಿ 82 ಕೆಜಿ ಭಾರ ಎತ್ತಲು ವಿಫಲರಾದ ಅವರು, ಎರಡನೇ ಪ್ರಯತ್ನದಲ್ಲಿ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಬಳಿಕ ಅಂತಿಮ ಪ್ರಯತ್ನದಲ್ಲಿ 85 ಕೆಜಿ ಎತ್ತಿ ಹಿಂದಿನ ಗೇಮ್ಸ್ ದಾಖಲೆಯನ್ನು ಮುರಿದರು.
ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಮೀರಾಬಾಯಿ ಚಾನು ಈಗಾಗಲೇ ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರು, 2018ರ ಗೋಲ್ಡ್ ಕೋಸ್ಟ್ ಹಾಗೂ 2022ರ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು.
ಇದೀಗ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಸತತ ಮೂರನೇ ಬಾರಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.





