30 July 2026 |

CWG 2026: ಗುಲ್ವಿರ್ ಸಿಂಗ್‌ಗೆ ಐತಿಹಾಸಿಕ ಬೆಳ್ಳಿ, ಹರಜಿಂದರ್ ಕೌರ್‌ಗೂ ಬೆಳ್ಳಿ; ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೂರು ಪದಕ ಖಚಿತ

  • 29 Jul 2026 02:29:03 PM

ಗ್ಲಾಸ್ಕೋ: ಕಾಮನ್‌ವೆಲ್ತ್ ಗೇಮ್ಸ್‌ 2026ರ ಐದನೇ ದಿನ ಭಾರತಕ್ಕೆ ಮತ್ತಷ್ಟು ಪದಕಗಳು ಲಭಿಸಿವೆ. ಅಥ್ಲೆಟಿಕ್ಸ್‌ನಲ್ಲಿ ಗುಲ್ವಿರ್ ಸಿಂಗ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಹೊಸ ಮೈಲುಗಲ್ಲು ನಿರ್ಮಿಸಿದರೆ, ವೇಟ್‌ಲಿಫ್ಟಿಂಗ್‌ನಲ್ಲಿ ಹರಜಿಂದರ್ ಕೌರ್ ಕೂಡ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದೇ ವೇಳೆ ಬಾಕ್ಸಿಂಗ್‌ನಲ್ಲಿ ಮೂವರು ಭಾರತೀಯ ಬಾಕ್ಸರ್‌ಗಳು ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಸಾಧನೆಗಳೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇದರಲ್ಲಿ 2 ಚಿನ್ನ, 7 ಬೆಳ್ಳಿ ಮತ್ತು 3 ಕಂಚಿನ ಪದಕಗಳಿದ್ದು, ಪದಕ ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ.

 

10,000 ಮೀಟರ್ ಓಟದಲ್ಲಿ ಗುಲ್ವಿರ್‌ಗೆ ಐತಿಹಾಸಿಕ ಸಾಧನೆ

26 ವರ್ಷದ ಗುಲ್ವಿರ್ ಸಿಂಗ್ ಪುರುಷರ 10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಮಳೆಯ ನಡುವೆಯೇ ನಡೆದ ಸ್ಪರ್ಧೆಯಲ್ಲಿ ಆರಂಭದಿಂದಲೇ ಮುಂಚೂಣಿಯಲ್ಲಿದ್ದ ಅವರು ಕೊನೆಯ 400 ಮೀಟರ್‌ವರೆಗೆ ತಂತ್ರಾತ್ಮಕವಾಗಿ ಓಟ ಮುಂದುವರಿಸಿದರು.

 

ಅಂತಿಮ ಸುತ್ತಿನಲ್ಲಿ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ವೇಗ ಹೆಚ್ಚಿಸಿ ಚಿನ್ನದ ಪದಕ ಗೆದ್ದರೆ, ಗುಲ್ವಿರ್ ಸಿಂಗ್ ಕೊನೆಯ ಕ್ಷಣದಲ್ಲಿ ಅತ್ಯುತ್ತಮ ಸ್ಪ್ರಿಂಟ್ ಪ್ರದರ್ಶಿಸಿ 27 ನಿಮಿಷ 49.78 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಐಲ್ ಆಫ್ ಮ್ಯಾನ್‌ನ ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

 

ಹರಜಿಂದರ್ ಕೌರ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

ಮಹಿಳೆಯರ 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಹರಜಿಂದರ್ ಕೌರ್ ಒಟ್ಟು 221 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು. ಸ್ನ್ಯಾಚ್‌ನಲ್ಲಿ 101 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ ನಿರ್ಣಾಯಕ 120 ಕೆಜಿ ಯಶಸ್ವಿಯಾಗಿ ಎತ್ತಿದ ಅವರು, ಗ್ಲಾಸ್ಕೋ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಳನೇ ವೇಟ್‌ಲಿಫ್ಟಿಂಗ್ ಪದಕ ತಂದುಕೊಟ್ಟರು. ಕೆನಡಾದ ಷಾರ್ಲೆಟ್ ಸಿಮೊನೋ ಗೇಮ್ಸ್ ದಾಖಲೆ ನಿರ್ಮಿಸಿ ಚಿನ್ನದ ಪದಕ ಪಡೆದರೆ, ಆಸ್ಟ್ರೇಲಿಯಾದ ಒಲಿವಿಯಾ ಹೇಮನ್ ಕಂಚಿನ ಪದಕ ಜಯಿಸಿದರು.

 

ಬಾಕ್ಸಿಂಗ್‌ನಲ್ಲಿ ಭಾರತದ ಗೆಲುವಿನ ಜೈತ್ರಯಾತ್ರೆ

ಮಹಿಳೆಯರ 54 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತೆ ಪ್ರೀತಿ ಪವಾರ್ ಆಕ್ರಮಣಕಾರಿ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸೆಮಿಫೈನಲ್ ತಲುಪಿದವರಿಗೆ ಕನಿಷ್ಠ ಕಂಚಿನ ಪದಕ ಖಚಿತವಾಗುವ ಹಿನ್ನೆಲೆಯಲ್ಲಿ ಅವರು ಈಗಾಗಲೇ ಪದಕವನ್ನು ಖಾತ್ರಿಪಡಿಸಿಕೊಂಡಿದ್ದಾರೆ.

 

ಪುರುಷರ 55 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜಾದುಮನಿ ಸಿಂಗ್ ಮಂದೆಂಗ್ಟಾಮ್ ಜಾಂಬಿಯಾದ ಮೈಂಗೊ ಮ್ಯಾಲೆ ವಿರುದ್ಧ ಏಕಮತದ ತೀರ್ಪಿನಿಂದ ಗೆದ್ದು ಅಂತಿಮ ನಾಲ್ಕರ ಘಟ್ಟ ತಲುಪಿದರು.ಮಹಿಳೆಯರ 60 ಕೆಜಿ ವಿಭಾಗದಲ್ಲಿ ಆತಿಥೇಯ ಸ್ಕಾಟ್ಲಂಡ್‌ನ ನಿಯಾಮ್ ಮಿಚೆಲ್ ವಿರುದ್ಧ ಕಣಕ್ಕಿಳಿದ ಪ್ರಿಯಾ ಘಂಗಾಸ್ ಏಕಪಕ್ಷೀಯ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಖಚಿತಪಡಿಸಿದರು.

 

ಹೆಚ್ಚಿನ ತೂಕ ವಿಭಾಗದಲ್ಲಿ ನಿರಾಸೆ

ಮಹಿಳೆಯರ 65 ಕೆಜಿ ವಿಭಾಗದಲ್ಲಿ ಪರ್ವೀನ್ ಹೂಡಾ ಇಂಗ್ಲೆಂಡ್‌ನ ಅಗ್ರ ಶ್ರೇಯಾಂಕಿತೆ ಸಾಚಾ ಹಿಕ್ಕಿ ವಿರುದ್ಧ ಏಕಮತದ ತೀರ್ಪಿನಲ್ಲಿ ಸೋಲು ಕಂಡರು. ಪುರುಷರ 90 ಕೆಜಿ ವಿಭಾಗದಲ್ಲಿ ಕಪಿಲ್ ಪೋಖಾರಿಯಾ ಸ್ಕಾಟ್ಲಂಡ್‌ನ ರಾಬರ್ಟ್ ಮೆಕ್‌ನಲ್ಟಿ ವಿರುದ್ಧ 5-0 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.