31 July 2026 |

ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ದ್ವಿಪದಕ ಸಂಭ್ರಮ: ದಿಲೀಪ್ ಗವಿತ್‌ಗೆ ಚಿನ್ನ, ಮೊಹಮ್ಮದ್ ಬಾಸಿಲ್‌ಗೆ ಬೆಳ್ಳಿ

  • 30 Jul 2026 03:29:41 PM

ಗ್ಲಾಸ್ಕೋ: ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತ ಮತ್ತೊಮ್ಮೆ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದು, ಪುರುಷರ 100 ಮೀಟರ್ ಟಿ47 ವಿಭಾಗದಲ್ಲಿ ದಿಲೀಪ್ ಮಹಾದು ಗವಿತ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಮೊಹಮ್ಮದ್ ಬಾಸಿಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಐತಿಹಾಸಿಕ ಡಬಲ್‌ ಸಾಧನೆ ತಂದುಕೊಟ್ಟರು.

 

ಫೈನಲ್‌ನಲ್ಲಿ ದಿಲೀಪ್ ಮಹಾದು ಗವಿತ್ ಕೇವಲ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಹಿಂದಿನ ಗೇಮ್ಸ್ ದಾಖಲೆಯನ್ನು ಅಳಿಸಿ ಹೊಸ ದಾಖಲೆ ನಿರ್ಮಿಸಿದರು. ಮತ್ತೊಂದೆಡೆ, ಮೊಹಮ್ಮದ್ ಬಾಸಿಲ್ 10.83 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಒಂದೇ ಸ್ಪರ್ಧೆಯಲ್ಲಿ ಭಾರತ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದಿರುವುದು ವಿಶೇಷವಾಗಿದೆ.

 

ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಮೂರನೇ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ಮಹಿಳೆಯರ ಶಾಟ್‌ಪುಟ್ ಎಫ್57 ವಿಭಾಗದಲ್ಲಿ ಶರ್ಮಿಳಾ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಜಯಿಸಿದ್ದರು. ಇಂಗ್ಲೆಂಡ್‌ನ ಕೆವಿನ್ ಸ್ಯಾಂಟೋಸ್ 10.85 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

 

ಮಹಾರಾಷ್ಟ್ರದ ನಾಸಿಕ್ ಸಮೀಪದ ತೋರನ್ ಡೊಂಗರಿ ಗ್ರಾಮದಲ್ಲಿ ಜನಿಸಿದ ದಿಲೀಪ್ ಮಹಾದು ಗವಿತ್ ಕೃಷಿಕ ಕುಟುಂಬದ ಹಿನ್ನೆಲೆಯವರು. ಬಾಲ್ಯದಲ್ಲೇ ಮರದಿಂದ ಬಿದ್ದ ಪರಿಣಾಮ ಬಲಗೈಗೆ ತೀವ್ರ ಗಾಯವಾಗಿತ್ತು. ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ಗಾಯ ಗ್ಯಾಂಗ್ರೀನ್‌ಗೆ ತಿರುಗಿ, ಮೊಣಕೈ ಕೆಳಭಾಗದ ಕೈಯನ್ನು ಕತ್ತರಿಸಬೇಕಾಯಿತು. ಈ ದೊಡ್ಡ ಸವಾಲಿನ ನಡುವೆಯೂ ಅವರು ಧೈರ್ಯ ಕಳೆದುಕೊಳ್ಳದೆ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಹಳ್ಳಿಯ ಧೂಳಿನ ರಸ್ತೆಗಳಲ್ಲೇ ಅಭ್ಯಾಸ ಆರಂಭಿಸಿದ್ದ ಅವರ ಪ್ರತಿಭೆಯನ್ನು ತರಬೇತುದಾರ ವೈಜನಾಥ್ ಕೇಲ್ ಗುರುತಿಸಿ, ವೃತ್ತಿಪರ ಪ್ಯಾರಾ ಅಥ್ಲೆಟಿಕ್ಸ್ ಕ್ಷೇತ್ರದತ್ತ ಮುನ್ನಡೆಸಿದರು. ಇಂದು ಅದೇ ಪರಿಶ್ರಮ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಸಾಧನೆ ತಂದುಕೊಟ್ಟಿದೆ.