ಕೋಲ್ಕತ್ತಾ: ಭಾರತೀಯ ಫುಟ್‌ಬಾಲ್ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣ ಸಮೀಪಿಸುತ್ತಿದೆ. ಐದು ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ಬ್ರೆಜಿಲ್ ರಾಷ್ಟ್ರೀಯ ತಂಡವು ಅಕ್ಟೋಬರ್ 3ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಲಿದೆ.
ಈ ಪಂದ್ಯವನ್ನು ಬ್ರೆಜಿಲಿಯನ್ ಫುಟ್‌ಬಾಲ್ ಒಕ್ಕೂಟ (CBF) ಅಧಿಕೃತವಾಗಿ ದೃಢಪಡಿಸಿದ್ದು, ಬ್ರೆಜಿಲ್ ತಂಡವು ಭಾರತದ ನೆಲದಲ್ಲಿ ಮೊದಲ ಬಾರಿಗೆ ಆಡಲಿರುವುದು ವಿಶೇಷವಾಗಿದೆ.
ಈ ಘೋಷಣೆಯೊಂದಿಗೆ ಬ್ರೆಜಿಲ್ ತಂಡದ ಭಾರತ ಪ್ರವಾಸದ ಕುರಿತು ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಈ ಹಿಂದೆ ಸಿಬಿಎಫ್ ಮತ್ತು ಆಯೋಜಕರ ನಡುವೆ ಕೋಲ್ಕತ್ತಾದಲ್ಲಿ ಸ್ನೇಹಪರ ಪಂದ್ಯ ಆಯೋಜಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿತ್ತು.
2026ರ ಫಿಫಾ ವಿಶ್ವಕಪ್ ವೇಳೆ ಸಿಬಿಎಫ್ ಹಾಗೂ ಭಾರತೀಯ ಪಾಲುದಾರರ ನಡುವೆ ಈ ಕುರಿತು ಚರ್ಚೆಗಳು ಆರಂಭವಾಗಿದ್ದವು ಎನ್ನಲಾಗಿದೆ. ವಿಶ್ವಕಪ್ ಸಂದರ್ಭದಲ್ಲಿ ಬ್ರೆಜಿಲ್ ತಂಡಕ್ಕೆ ಭಾರತೀಯ ಅಭಿಮಾನಿಗಳಿಂದ ದೊರೆತ ಭಾರಿ ಬೆಂಬಲ, ದೇಶದಾದ್ಯಂತ ಕಂಡುಬಂದ ಸಂಭ್ರಮಾಚರಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ವ್ಯಾಪಕ ಪ್ರತಿಕ್ರಿಯೆ ಬ್ರೆಜಿಲ್ ತಂಡವನ್ನು ಭಾರತದಲ್ಲಿ ಪಂದ್ಯವಾಡಲು ಪ್ರೇರೇಪಿಸಿದೆ ಎಂದು ತಿಳಿದುಬಂದಿದೆ.
ಸಿಬಿಎಫ್ ಪ್ರಕಟಣೆಯಲ್ಲಿ, ಆಸ್ಟ್ರೇಲಿಯಾದಲ್ಲಿ ನಡೆಯುವ ಸ್ನೇಹಪರ ಪಂದ್ಯಗಳ ಬಳಿಕ ತಂಡ ಭಾರತಕ್ಕೆ ಆಗಮಿಸಲಿದ್ದು, ಭಾರತೀಯ ನೆಲದಲ್ಲಿ ಮೊದಲ ಬಾರಿಗೆ ಆಡಲಿರುವುದು ತಮ್ಮ ಇತಿಹಾಸದ ವಿಶೇಷ ಅಧ್ಯಾಯವಾಗಲಿದೆ ಎಂದು ತಿಳಿಸಿದೆ. ಜೊತೆಗೆ, ಬ್ರೆಜಿಲಿಯನ್ ಫುಟ್‌ಬಾಲ್‌ಗೆ ಅಪಾರ ಪ್ರೀತಿ ತೋರಿರುವ ಭಾರತೀಯ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ತಂಡ ಕಾತರವಾಗಿದೆ ಎಂದೂ ಹೇಳಿದೆ.
ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಕೂಡ ಪಂದ್ಯವನ್ನು ದೃಢಪಡಿಸಿದೆ. ಅಕ್ಟೋಬರ್ 3ರಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬ್ರೆಜಿಲ್ ನಡುವೆ ಫಿಫಾ ಅಂತರರಾಷ್ಟ್ರೀಯ ಸ್ನೇಹಪರ ಪಂದ್ಯ ನಡೆಯಲಿದೆ ಎಂದು ಎಐಎಫ್‌ಎಫ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.





