05 August 2026 |

ಕಾಮನ್‌ವೆಲ್ತ್ ಕ್ರೀಡಾಕೂಟ: 39 ಪದಕಗಳೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

  • 04 Aug 2026 05:50:56 PM

ಗ್ಲಾಸ್ಕೋ: ಕಾಮನ್‌ವೆಲ್ತ್ ಕ್ರೀಡಾಕೂಟವು ಭಾನುವಾರ ತಡರಾತ್ರಿ ನಡೆದ ಸಮಾರೋಪ ಸಮಾರಂಭದೊಂದಿಗೆ ಅಧಿಕೃತವಾಗಿ ಮುಕ್ತಾಯಗೊಂಡಿತು.

 

ಸಮಾರೋಪ ಸಮಾರಂಭದಲ್ಲಿ ಭಾರತದ ಪರ ಬಾಕ್ಸರ್ ಜಾಸ್ಮಿನ್ ಲಾಂಬೋರಿಯಾ ತ್ರಿವರ್ಣ ಧ್ವಜವನ್ನು ಹಿಡಿದು ಕ್ರೀಡಾಪಟುಗಳ ಮೆರವಣಿಗೆಯಲ್ಲಿ ಭಾಗವಹಿಸಿದರು. ಇದೇ ವೇಳೆ ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜವನ್ನು ಭಾರತಕ್ಕೆ ಹಸ್ತಾಂತರಿಸುವ ಅಧಿಕೃತ ಕಾರ್ಯಕ್ರಮವೂ ನೆರವೇರಿತು. 2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಆತಿಥ್ಯ ವಹಿಸಲಿದ್ದು, ಅಹ್ಮದಾಬಾದ್‌ನಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸಮಾರೋಪದಲ್ಲಿ ಭಾರತದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಅನಾವರಣಗೊಳಿಸುವ ವಿಶೇಷ ಪ್ರದರ್ಶನ ಗಮನ ಸೆಳೆಯಿತು.

 

ಈ ಆವೃತ್ತಿಯಲ್ಲಿ ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಸೇರಿಸಿ ಒಟ್ಟು 39 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 61 ಪದಕಗಳನ್ನು ಗೆದ್ದಿದ್ದರಿಂದ ಈ ಬಾರಿ ಪದಕಗಳ ಸಂಖ್ಯೆ ಕಡಿಮೆಯಾಗಿದೆ. ಆದಾಗ್ಯೂ, ಒಟ್ಟಾರೆ ಶ್ರೇಯಾಂಕದಲ್ಲಿ ಭಾರತ ಸತತ ಎರಡನೇ ಬಾರಿಯೂ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

 

ಈ ಬಾರಿ ಕುಸ್ತಿ, ಬ್ಯಾಡ್ಮಿಂಟನ್ ಹಾಗೂ ಹಾಕಿಯಂತಹ ಭಾರತಕ್ಕೆ ಹೆಚ್ಚು ಪದಕ ತಂದುಕೊಡುವ ಕೆಲವು ಪ್ರಮುಖ ಕ್ರೀಡೆಗಳು ಸ್ಪರ್ಧೆಗಳ ಪಟ್ಟಿಯಲ್ಲಿ ಇರಲಿಲ್ಲ. ಇದರಿಂದ ಪದಕಗಳ ಸಂಖ್ಯೆಯ ಮೇಲೂ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗಿದೆ.

 

ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತೊಮ್ಮೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, 70 ಚಿನ್ನ ಸೇರಿದಂತೆ ಒಟ್ಟು 171 ಪದಕಗಳನ್ನು ಗೆದ್ದಿದೆ. ಇಂಗ್ಲೆಂಡ್ 110 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಕೆನಡಾ 62 ಪದಕಗಳನ್ನು ಪಡೆದು ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕಳೆದ ಆವೃತ್ತಿಗೆ ಹೋಲಿಸಿದರೆ ಈ ಮೂರು ರಾಷ್ಟ್ರಗಳ ಪದಕಗಳ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆ.