21 July 2026 |

ಫುಟ್ಬಾಲ್ ವಿಶ್ವಕಪ್ ಚಾಂಪಿಯನ್ ಸ್ಪೇನ್; ಅರ್ಜೆಂಟೀನಾವನ್ನು ಮಣಿಸಿ ಎರಡನೇ ಬಾರಿ ವಿಶ್ವದ ಅಗ್ರಸ್ಥಾನ

  • 20 Jul 2026 03:49:11 AM

ನ್ಯೂಯಾರ್ಕ್: ಫುಟ್ಬಾಲ್ ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳಿಂದ ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಿಗದಿತ 90 ನಿಮಿಷಗಳಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ ಹೆಚ್ಚುವರಿ ಅವಧಿಗೆ ಸಾಗಿತು. ಅಂತಿಮವಾಗಿ ಹೆಚ್ಚುವರಿ ಅವಧಿಯ 106ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟರು. 

 

ಪಂದ್ಯದ ಬಹುಭಾಗದಲ್ಲಿ ಸ್ಪೇನ್ ತಂಡವೇ ಮೇಲುಗೈ ಸಾಧಿಸಿತು. ನಿರಂತರ ದಾಳಿಗಳ ಮೂಲಕ ಅರ್ಜೆಂಟೀನಾ ರಕ್ಷಣಾ ಪಡೆಯನ್ನು ಒತ್ತಡಕ್ಕೆ ಸಿಲುಕಿಸಿತು. ಮತ್ತೊಂದೆಡೆ, ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡಕ್ಕೆ ಸ್ಪೇನ್‌ನ ಶಿಸ್ತುಬದ್ಧ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಪಂದ್ಯದ ಕೊನೆಯ ಹಂತದಲ್ಲಿ ಎನ್ಜೊ ಫೆರ್ನಾಂಡೆಸ್ ಕೆಂಪು ಕಾರ್ಡ್ ಪಡೆದ ಕಾರಣ ಅರ್ಜೆಂಟೀನಾ 10 ಆಟಗಾರರೊಂದಿಗೆ ಪಂದ್ಯವನ್ನು ಮುಗಿಸಬೇಕಾಯಿತು. 

 

ಈ ಗೆಲುವಿನೊಂದಿಗೆ ಸ್ಪೇನ್ ತನ್ನ ಇತಿಹಾಸದಲ್ಲಿ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಸಾಧನೆ ಮಾಡಿದೆ. 2010ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದ್ದ ಸ್ಪೇನ್, 16 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವ ಫುಟ್ಬಾಲ್ ಸಿಂಹಾಸನಕ್ಕೇರಿದೆ. ಯುವ ಆಟಗಾರರು ಮತ್ತು ಅನುಭವಿಗಳ ಸಮತೋಲನದ ಪ್ರದರ್ಶನ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.

 

ವಿಶ್ವದಾದ್ಯಂತ ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳ ಕಣ್ಮನ ಸೆಳೆದ ಈ ಫೈನಲ್ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಸ್ಪೇನ್ ತಂಡದ ಆಟಗಾರರು ಮತ್ತು ಅಭಿಮಾನಿಗಳು ಐತಿಹಾಸಿಕ ವಿಜಯವನ್ನು ಸಂಭ್ರಮಿಸಿದರೆ, ಅರ್ಜೆಂಟೀನಾಕ್ಕೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಕನಸು ಈ ಬಾರಿ ಕೈ ತಪ್ಪಿತು.