ಬಂಟ್ವಾಳ : ಯುವವಾಹಿನಿ ಸಂಸ್ಥೆಯ ಶಿಸ್ತು, ಸಂಘಟನಾ ಸಾಮರ್ಥ್ಯ ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳು ನಿಜಕ್ಕೂ ಅನುಕರಣೀಯವಾಗಿವೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಹೇಳಿದರು.
ಅವರು ಜೂನ್ 21 ರಂದು ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಯುವವಾಹಿನಿ ಬಂಟ್ವಾಳ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 38 ವರ್ಷಗಳಿಂದ ಯುವವಾಹಿನಿ ಯುವಜನರನ್ನು ಒಗ್ಗೂಡಿಸಿ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಸಂಘಟನೆಯ ಕಾರ್ಯಕ್ರಮಗಳಲ್ಲಿ ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಮತ್ತು ವ್ಯವಸ್ಥಿತ ನಿರ್ವಹಣೆಯೇ ಅದರ ಯಶಸ್ಸಿನ ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿಯೂ ಯುವವಾಹಿನಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಸಮಾಜಕ್ಕೆ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಳೆದ ಒಂದು ವರ್ಷ ಅವಧಿಯಲ್ಲಿ ಯುವವಾಹಿನಿ ಬಂಟ್ವಾಳ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಯುವವಾಹಿನಿ ಬಂಟ್ವಾಳ ಘಟಕವು ಇತರ ಘಟಕಗಳಿಗೆ ಮಾದರಿಯಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಎನ್. ಅಶೋಕ್ ಕುಮಾರ್ ಪಡ್ಪು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅವರು 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ದ.ಕ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಅಗಮಿಸಿ ನೂತನ ತಂಡಕ್ಕೆ ಶುಭ ಹಾರೈಸಿಸಿದರು
ಯುವವಾಹಿನಿ ಬಂಟ್ವಾಳ ಘಟಕದ ನಿಕಟಪೂರ್ವ ಅಧ್ಯಕ್ಷ ಹಾಗೂ ಆಯ್ಕೆ ಸಮಿತಿಯ ಸಂಚಾಲಕರಾದ ದಿನೇಶ್ ಸುವರ್ಣ ರಾಯಿ ನೂತನ ಕಾರ್ಯಕಾರಿ ಸಮಿತಿಯನ್ನು ಸಭೆಗೆ ಪರಿಚಯಿಸಿದರು.
ಹಿರಿಯರ ಮಾರ್ಗದರ್ಶನ ಹಾಗೂ ಸದಸ್ಯರ ಸಹಕಾರದಿಂದ ಯುವವಾಹಿನಿ ಬಂಟ್ವಾಳ ಘಟಕವನ್ನು ಇನ್ನಷ್ಟು ಸಕ್ರಿಯವಾಗಿ ಮುನ್ನಡೆಸುವ ಆತ್ಮವಿಶ್ವಾಸವಿದೆ ಎಂದು ನೂತನ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಕಿರಣ್‌ರಾಜ್ ಪೂಂಜರೆಕೋಡಿ ಹೇಳಿದರು.
ಫಾದರ್ ಮುಲ್ಲರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ಉಜ್ವಲ್ ಯು. ಸುವರ್ಣ ಹಾಗೂ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ವಿಶ್ವನಾಥ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಕೊಂಕಣಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ 11 ವರ್ಷಗಳಿಂದ ಯುವವಾಹಿನಿ ಬಂಟ್ವಾಳ ಘಟಕದ ಕಚೇರಿಗೆ ಸ್ಥಳಾವಕಾಶ ಒದಗಿಸಿ ಸಹಕರಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೇಶ್ ಬಿ. ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಾಗೆಯೇ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು, ಕಾರ್ಯದರ್ಶಿ ಮಧುಸೂದನ್ ಮದ್ವ ಹಾಗೂ ಕೋಶಾಧಿಕಾರಿ ನವೀನ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಮಧುಸೂದನ್ ಮದ್ವ 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ನಾಗೇಶ್ ಪೂಜಾರಿ ನೈಬೇಲು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಗೀತಾ ಜಗದೀಶ್ ಧನ್ಯವಾದ ಸಲ್ಲಿಸಿದರು. ಮಲ್ಲಿಕಾ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.





