ಮಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಅವರು ಜೂನ್ 25ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ನಗರದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ರೋಹನ್ ಕಾರ್ಪೊರೇಷನ್ ಆಯೋಜಿಸಿರುವ “An Evening with Shah Rukh Khan” ಕಾರ್ಯಕ್ರಮವು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದ್ದು, ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಶಾರುಖ್ ಖಾನ್ ಅವರು ರೋಹನ್ ಕಾರ್ಪೊರೇಷನ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಸಂಸ್ಥೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ರೋಹನ್ ಕಾರ್ಪೊರೇಷನ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೇರೊ, ಶಾರುಖ್ ಖಾನ್ ಅವರ ಮಂಗಳೂರು ಭೇಟಿ ಸಂಸ್ಥೆಗೆ ಹಾಗೂ ನಗರಕ್ಕೆ ವಿಶೇಷ ಸಂದರ್ಭವಾಗಿದ್ದು, ಅವರ ಆಗಮನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ನೋಂದಾಯಿಸಿಕೊಂಡವರಿಗೆ ಹಾಗೂ ಅಧಿಕೃತ ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಶಾರುಖ್ ಖಾನ್ ಅವರ ಮಂಗಳೂರು ಭೇಟಿಯ ಸುದ್ದಿ ಹೊರಬಿದ್ದ ಬಳಿಕ ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿದ್ದು, ಕಾರ್ಯಕ್ರಮದತ್ತ ಗಮನ ಸೆಳೆದಿದೆ.





