ಕೊಲ್ಲೂರು: ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಅಪರೂಪದ ನೇರಳೆ ಬಣ್ಣದ ಏಡಿಯೊಂದು ಗಮನ ಸೆಳೆದಿದೆ. ವಿಶಿಷ್ಟ ಬಣ್ಣ ಮತ್ತು ವಿಭಿನ್ನ ಚಲನವಲನ ಹೊಂದಿರುವ ಈ ಏಡಿಯ ಪತ್ತೆ ಇದೀಗ ಜೀವವೈವಿಧ್ಯ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.
ಕಳೆದ ವರ್ಷ ಕೊಲ್ಲೂರು ವ್ಯಾಪ್ತಿಯ ಕಾಡಿನಲ್ಲಿ ಗಸ್ತಿನಲ್ಲಿದ್ದ ತರಂತರಾಜ್ ಅಮೀರ್ ಅವರು ಈ ಅಪರೂಪದ ಏಡಿಯನ್ನು ಮೊದಲು ಗಮನಿಸಿದ್ದರು. ಅದರ ಬಣ್ಣ ಮತ್ತು ಚಲನವಲನ ಅವರ ಕುತೂಹಲಕ್ಕೆ ಕಾರಣವಾಗಿತ್ತು.
ನಂತರ ಅವರು ಈ ವಿಷಯವನ್ನು ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ಸಂತನು ಮಿತ್ರ ಅವರ ಗಮನಕ್ಕೆ ತಂದರು. ಇದು ಈವರೆಗೆ ದಾಖಲಾಗದ ಹೊಸ ಪ್ರಭೇದವಾಗಿರಬಹುದು ಎಂದು ಶಂಕಿಸಿದ ವಿಜ್ಞಾನಿಗಳು, ಅಧಿಕೃತ ಅನುಮತಿ ಪಡೆದು ಗಂಡು ಮತ್ತು ಹೆಣ್ಣು ಏಡಿಗಳ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದರು.
ಈ ಹೊಸ ಪ್ರಭೇದಕ್ಕೆ 'ಘಾಟಿಯಾನಾ ಕರ್ನಾಟಕ' (Ghatiana Karanataka) ಎಂಬ ವೈಜ್ಞಾನಿಕ ಹೆಸರು ನೀಡಲಾಗಿದೆ. ಕರ್ನಾಟಕದ ಜೀವವೈವಿಧ್ಯವನ್ನು ಗುರುತಿಸುವ ಉದ್ದೇಶದಿಂದ ಈ ಹೆಸರು ಇಡಲಾಗಿದೆ.
ಗಂಡು ಏಡಿಯ ದೇಹ ಗಾಢ ನೇರಳೆ ಬಣ್ಣದಲ್ಲಿದ್ದು, ಬೆನ್ನಿನ ಕವಚದ ಮೇಲೆ ಗುಲಾಬಿ ಬಣ್ಣದ ‘V’ ಆಕಾರದ ಗುರುತು ಕಂಡುಬರುತ್ತದೆ. ತೇವಾಂಶ ಹೆಚ್ಚಿರುವ ಸದಾಹರಿದ್ವರ್ಣ ಮತ್ತು ಅರೆ ಸದಾಹರಿದ್ವರ್ಣ ಕಾಡುಗಳಲ್ಲಿ, ಬಂಡೆಗಳ ಸೀಳುಗಳು ಹಾಗೂ ನೀರು ತುಂಬಿರುವ ಸಣ್ಣ ಕುಳಿಗಳಲ್ಲಿ ಈ ಏಡಿ ವಾಸಿಸುತ್ತದೆ.
ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಇನ್ನೂ ದಾಖಲಾಗದ ಹಲವು ಅಪರೂಪದ ಜೀವಿಗಳು ಇರಬಹುದೆಂಬುದಕ್ಕೆ ಇಂತಹ ಪತ್ತೆಗಳು ಮತ್ತೊಂದು ಉದಾಹರಣೆಯಾಗಿದೆ.





