15 September 2026 |

ಕೆಪಿಎಸ್‌ಸಿಯಿಂದ 68 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

  • 14 Sep 2026 12:40:54 PM

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಉಳಿಕೆ ಮೂಲ ವೃಂದದಲ್ಲಿರುವ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

 

ಈ ನೇಮಕಾತಿಯಲ್ಲಿ 15 ಸಹಾಯಕ ನಿಯಂತ್ರಕರು ಹಾಗೂ 53 ಲೆಕ್ಕ ಪರಿಶೋಧನಾಧಿಕಾರಿಗಳ ಹುದ್ದೆಗಳು ಸೇರಿದಂತೆ ಒಟ್ಟು 68 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸಹಾಯಕ ನಿಯಂತ್ರಕರಿಗೆ ₹83,700ರಿಂದ ₹1,55,200 ಹಾಗೂ ಲೆಕ್ಕ ಪರಿಶೋಧನಾಧಿಕಾರಿಗಳಿಗೆ ₹69,250ರಿಂದ ₹1,34,200 ವೇತನ ಶ್ರೇಣಿ ನಿಗದಿಯಾಗಿದೆ.

 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಎಂ.ಕಾಂ), ಎಂ.ಬಿ.ಎ ಅಥವಾ ಸಂಬಂಧಿತ ವೃತ್ತಿಪರ ಅರ್ಹತೆಯನ್ನು ಹೊಂದಿರಬೇಕು. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರು ಅಥವಾ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಸೋಸಿಯೇಟ್ ಸದಸ್ಯರೂ ಅರ್ಹರಾಗಿರುತ್ತಾರೆ.

 

ವಯೋಮಿತಿಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, 2ಎ, 2ಬಿ, 3ಎ ಮತ್ತು 3ಬಿ ವರ್ಗದವರಿಗೆ 38 ವರ್ಷ, ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾನುಸಾರ ಹೆಚ್ಚುವರಿ 5 ವರ್ಷಗಳ ವಯೋಮಿತಿ ಸಡಿಲಿಕೆ ಕೂಡ ಅನ್ವಯವಾಗಲಿದೆ.

 

ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 26ರೊಳಗೆ ಕೆಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.