16 October 2026 |

ರೇಷನ್ ಕಾರ್ಡ್ ಫಲಾನುಭವಿಗಳಿಗೆ ಮಹತ್ವದ ಸುದ್ದಿ: ಅನ್ನಸೇವೆ ಆ್ಯಪ್ ಇಂದಿನಿಂದ ರಾಜ್ಯಾದ್ಯಂತ ಲಭ್ಯ, ಅ.20ರೊಳಗೆ e-KYC ಕಡ್ಡಾಯ!

  • 14 Oct 2026 10:35:44 AM

ಬೆಂಗಳೂರು: ಅನ್ನಭಾಗ್ಯ ಸೇರಿದಂತೆ ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೌಲಭ್ಯ ಪಡೆಯುತ್ತಿರುವ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ‘ಅನ್ನಸೇವೆ’ ಮೊಬೈಲ್ ಆ್ಯಪ್ ಅನ್ನು ಅಕ್ಟೋಬರ್ 14ರಿಂದ ರಾಜ್ಯಾದ್ಯಂತ ಬಳಕೆಗೆ ಮುಕ್ತಗೊಳಿಸಿದೆ. ಈ ಆ್ಯಪ್ ಮೂಲಕ ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ಮುಖ ಗುರುತಿಸುವ ತಂತ್ರಜ್ಞಾನದ ಸಹಾಯದಿಂದ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ಪ್ರಕ್ರಿಯೆ ಮುಗಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮನವಿ ಮಾಡಿದೆ.

 

ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಹಾಗೂ ಇ-ಆಡಳಿತ ಇಲಾಖೆಯ ಸಹಯೋಗದಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಅಕ್ಟೋಬರ್ 1ರಂದು ಆ್ಯಪ್‌ಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸೇವೆ ಆರಂಭಿಸಲಾಗಿತ್ತು. ಇದೀಗ ಈ ಸೌಲಭ್ಯವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಅನ್ನಸೇವೆ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, UIDAI Face Authentication ವ್ಯವಸ್ಥೆಯ ಮೂಲಕ ತಮ್ಮ e-KYC ಪೂರ್ಣಗೊಳಿಸಬಹುದು.

 

ಇಲಾಖೆಯ ಮಾಹಿತಿಯ ಪ್ರಕಾರ, ಅಕ್ಟೋಬರ್ 1ರಿಂದ 12ರವರೆಗೆ ಪ್ರಾಯೋಗಿಕವಾಗಿ ಆ್ಯಪ್ ಬಳಸಿದ ಎಂಟು ಜಿಲ್ಲೆಗಳ ಒಟ್ಟು 1,60,267 ಫಲಾನುಭವಿಗಳು e-KYC ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ರಾಜ್ಯದಲ್ಲಿ ಈ ಪ್ರಕ್ರಿಯೆ ಮಾಡಿಸಬೇಕಿರುವ 2.67 ಕೋಟಿಗೂ ಅಧಿಕ ಫಲಾನುಭವಿಗಳ ಪೈಕಿ ಈಗಾಗಲೇ 2,06,76,278 ಮಂದಿ e-KYC ಮುಗಿಸಿದ್ದಾರೆ. ಉಳಿದ ಫಲಾನುಭವಿಗಳು ನಿಗದಿತ ದಿನಾಂಕದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.

 

ವಿಶೇಷವಾಗಿ ಉದ್ಯೋಗಕ್ಕಾಗಿ ತಮ್ಮ ಊರುಗಳನ್ನು ಬಿಟ್ಟು ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ವಲಸೆ ಹೋಗಿರುವ ಕಾರ್ಮಿಕರಿಗೆ ಈ ಆ್ಯಪ್ ಹೆಚ್ಚಿನ ಅನುಕೂಲ ಒದಗಿಸಲಿದೆ. ಈ ಹಿಂದೆ e-KYC ಮಾಡಿಸಲು ಸ್ವಗ್ರಾಮಕ್ಕೆ ಮರಳಬೇಕಾಗುತ್ತಿತ್ತು. ಜೊತೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯೂ ಇತ್ತು. ಆದರೆ, ಹೊಸ ಆ್ಯಪ್ ಮೂಲಕ ಮನೆಯಲ್ಲಿಯೇ ಕುಳಿತು ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ದೊರೆಯುವುದರಿಂದ ಸಮಯ ಮತ್ತು ಪ್ರಯಾಣದ ವೆಚ್ಚ ಉಳಿತಾಯವಾಗಲಿದೆ.

 

ಇನ್ನೊಂದು ಪ್ರಮುಖ ವಿಷಯವೆಂದರೆ, ಒಂದು ವರ್ಷದ ಹಿಂದೆ e-KYC ಮಾಡಿಸಿಕೊಂಡಿರುವ ಫಲಾನುಭವಿಗಳೂ ಮತ್ತೊಮ್ಮೆ ಈ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಈಗಾಗಲೇ e-KYC ಮಾಡಿಸಿಕೊಂಡಿದ್ದರೂ ಅದರಿಂದ ವಿನಾಯಿತಿ ಇರುವುದಿಲ್ಲ. ರೇಷನ್ ಕಾರ್ಡ್ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ಎಲ್ಲ ಅರ್ಹ ಫಲಾನುಭವಿಗಳು ಅಕ್ಟೋಬರ್ 20ರೊಳಗೆ ಅನ್ನಸೇವೆ ಆ್ಯಪ್ ಬಳಸಿ e-KYC ಪೂರ್ಣಗೊಳಿಸುವಂತೆ ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.