12 July 2025 | Join group

ಆಟಿಯ ವಿಶೇಷವೇನು? ಗೃಹಿಣಿಯರು ಈ ತಿಂಗಳಲ್ಲಿ ತವರು ಮನೆಗೆ ತೆರಳುವುದರ ಹಿನ್ನೆಲೆಯೇನು?

  • 06 Jul 2025 03:45:11 PM

ಆಟಿ ಮಾಸ ತುಳುನಾಡಿನಲ್ಲಿ ಅತೀ ಮಳೆಸುರಿಯುವ ಕಾಲ. ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಮತ್ತು ಮಲೆನಾಡಿನಲ್ಲಿ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ವಿಪರೀತ ಮಳೆ ಸುರಿಯುತ್ತದೆ. ಹಾಗಾಗಿ ಈ ಮಾಸ ಶುಭ ಕಾರ್ಯಗಳಿಗೆ ಹೇಳಿಸಿದ್ದಲ್ಲವಾದ್ದರಿಂದ ಈ ಮಾಸದಲ್ಲಿ ಯಾರೂ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

 

ಮನೆಯಿಂದ ಹೊರಗೆ ಕಾಲಿಡದಷ್ಟು ಮಳೆ ಸುರಿಯುವ ಈ ಕಾಲದಲ್ಲಿ ಮನೆಯಲ್ಲಿ ಹೆಚ್ಚು ಕೆಲಸವೇನೂ ಇರುವುದಿಲ್ಲ. ಮಳೆಯ ಏಕತಾನತೆ ಮತ್ತು ಕೆಲಸಗಳು ಕಡಿಮೆಯಿರುವುದರಿಂದ ಕೃಷಿಯೇ ಪ್ರಧಾನವಾಗಿದ್ದ ಈ ಭಾಗದಲ್ಲಿ ಈ ತಿಂಗಳು ಮಗಳು ತವರು ಮನೆಗೆ ತೆರಳುವ ಸಂಪ್ರದಾಯವಿದೆ.

 

ಆಟಿಯಲ್ಲಿ ಕೃಷಿ ಚಟುವಟಿಕೆಗಳೂ ಕಡಿಮೆ ಇರುವುದು ಇದಕ್ಕೆ ಕಾರಣ. ಮಾನಸಿಕವಾಗಿ ಬೇಸರ ಉಂಟಾಗುವ ಸಂಭವವೂ ಹೆಚ್ಚು. ಆ ಬೇಸರದಲ್ಲಿ ಹೆಣ್ಣಿಗೆ ತಾಯಿಯ ಮನೆಯ ನೆನಪಾಗುವುದು ಸಹಜ. ಅದೇ ರೀತಿ ತವರು ಮನೆಯಲ್ಲೂ ಕೃಷಿ ಕೆಲಸಗಳು ಹೆಚ್ಚಿಗೆ ಇಲ್ಲದೇ ಇರುವುದರಿಂದ ತಾಯಿ ಮನೆಗೆ ತೆರಳಿ ಹೆಚ್ಚು ದಿವಸ ಉಳಿಯಲು ಅವಕಾಶ ಸಿಗುತ್ತದೆ.

 

ಈ ಎಲ್ಲಾ ಕಾರಣಗಳಿಂದ ಆಟಿಯಲ್ಲಿ ಹೆಂಗಸರು ತವರುಮನೆಗೆ ತೆರಳುವ ಸಂಪ್ರದಾಯ ರೂಢಿಯಲ್ಲಿ ಬಂತು. ಮದುವೆಯಾದ ಹೊಸತರಲ್ಲಿ ತಾಯಿ ಮನೆಯ ನೆನಪು ಹೆಚ್ಚಿಗೆ. ಆದ್ದರಿಂದ, ಮದುವೆಯಾದ ವರ್ಷವಂತೂ ಇದನ್ನು ಕಡ್ಡಾಯಗೊಳಿಸಿದರು. ಈಗೀಗ ಜನತೆ ಕೃಷಿಯಿಂದ ದೂರಸರಿಯುತ್ತಿರುವುದು ಹೆಚ್ಚಿರುವ ನಗರವಾಸ ಮತ್ತು ವಾಹನ ದೂರವಾಣಿ ಮುಂತಾದ ಸೌಲಭ್ಯಗಳಿಂದ ಈ ರೂಢಿ ಮಹತ್ವ ಕಳೆದು ಕೊಳ್ಳುತ್ತಿದೆಯಾದರು ಹಳ್ಳಿಗಳಲ್ಲಿ ಆಚರಣೆಯಲ್ಲಿದೆ.

ಸೂತ್ರ: 'ನಂಬಿಕೆ ನಡವಳಿಕೆ' ಪುಸ್ತಕದ ಆಧಾರದ ಮೇಲೆ